ಬುಲ್ಲಿ ಬಾಯಿ ಆ್ಯಪ್ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಇಂದು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಅಪ್ಲಿಕೇಶನ್ನ ಮೂಲಕ ಸಾಕಷ್ಟು ಮುಸ್ಲಿಂ ಮಹಿಳೆಯರನ್ನು ಅವಮಾನ ಮಾಡಲಾಗಿತ್ತು. ಮುಂಬೈ ಪೊಲೀಸರು ಓಡಿಶಾದ ನೀರಜ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ.
ತನಿಖೆಯ ವೇಳೆಯಲ್ಲಿ ಈ ಪ್ರಕರಣದಲ್ಲಿ ನೀರಜ್ ಸಿಂಗ್ ಪಾತ್ರ ಇರುವುದು ಕೂಡ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈತನನ್ನು ಶೀಘ್ರದಲ್ಲಿಯೇ ಮುಂಬೈಗೆ ಕರೆದುಕೊಂಡು ಬರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೀರಜ್ ಸಿಂಗ್ ಬುಲ್ಲಿ ಬಾಯಿ ಆ್ಯಪ್ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾದ ನಾಲ್ಕನೇ ಆರೋಪಿಯಾಗಿದ್ದಾನೆ. ಪ್ರಕರಣದ ಪ್ರಮುಖ ಆರೋಪಿ ನೀರಜ್ ಬಿಷ್ಣೋಯಿ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಮಧ್ಯಪ್ರದೇಶದ ಭೋಪಾಲ್ನ ಕಾಲೇಜಿಂದ ಈತನನ್ನು ಅಮಾನತುಗೊಳಿಸಲಾಗಿದೆ. ಈತ ಇಂಜಿನಿಯರಿಂಗ್ 2ನೇ ವರ್ಷದ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳಾದ ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಹಾಗೂ ಮಯಂಕ್ ರಾವತ್ರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ವಿಶಾಲ್ ಕುಮಾರ್ ಝಾನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಹಾಗೂ ಇನ್ನಿಬ್ಬರು ಆರೋಪಿಗಳನ್ನು ಉತ್ತರಾಖಂಡ್ನಲ್ಲಿ ಬಂಧಿಸಲಾಗಿದೆ.