2ನೇ ಅಥವಾ 3ನೇ ಶತಮಾನದ ಬುದ್ಧನ ಪುರಾತನ ಕಲ್ಲಿನ ಶಿಲ್ಪವನ್ನು ಅಮೃತಸರದಲ್ಲಿ ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದ ಅಟ್ಟಾರಿ-ವಾಘಾ ಗಡಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ಭಾರತಕ್ಕೆ ಆಗಮಿಸಿದ ವಿದೇಶಿ ಪ್ರಜೆಯೊಬ್ಬನನ್ನು ತಡೆಹಿಡಿದು ಅವರ ವಸ್ತುಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಅಧಿಕಾರಿಗಳು ಬುದ್ಧನ ಕಲ್ಲಿನ ಶಿಲ್ಪವನ್ನು ಪತ್ತೆ ಮಾಡಿದರು ಎಂದು ಕಸ್ಟಮ್ಸ್ (ಅಮೃತಸರ) ಆಯುಕ್ತರು ತಿಳಿಸಿದ್ದಾರೆ.
ಈ ವಿಷಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಚಂಡೀಗಢ ವೃತ್ತದ ಕಚೇರಿಗೆ ತಿಳಿಸಲಾಗಿತ್ತು.
ಈ ಶಿಲ್ಪದ ತುಣುಕು ಗಾಂಧಾರ ಸ್ಕೂಲ್ ಆಫ್ ಆರ್ಟ್‌ನ ಬುದ್ಧ ಎಂದು ತೋರುತ್ತಿದೆ ಮತ್ತು 2 ಅಥವಾ 3 ನೇ ಶತಮಾನದ್ದು ಎಂದು ತಿಳಿಯಲಾಗಿದೆ ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆ ವರದಿಯನ್ನು ನೀಡಿದೆ ಎಂದು ಕಸ್ಟಮ್ಸ್ ಕಮಿಷನರ್ (ಅಮೃತಸರ) ರಾಹುಲ್ ನಂಗರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಸ್ಟಮ್ಸ್ ಆಕ್ಟ್ ಮತ್ತು ಆರ್ಟ್ ಟ್ರೆಷರ್ ಆಕ್ಟ್ 1972 ರ ಅಡಿಯಲ್ಲಿ ಕಲ್ಲಿನ ಶಿಲ್ಪವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.