2024ರ ಲೋಕಸಭಾ ಚುನಾವಣೆ ಬಳಿಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂಬ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಹೆಚ್.ಸಿ. ಮಹಾದೇವಪ್ಪ, ಉಮೇಶ್ ಕತ್ತಿ ನನಗೆ ಒಳ್ಳೆಯ ಸ್ನೇಹಿತ. ಆದರೆ ಆತ ಬುದ್ಧಿ ಇಲ್ಲದ ಅವಿವೇಕಿ. ಅರಣ್ಯ ಇಲಾಖೆಯಂತಹ ಪ್ರಮುಖ ಖಾತೆ ಹೊಂದಿದ್ದರೂ ಸಹ ಕೆಲಸವಿಲ್ಲದಂತೆ ಇದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿಗೆ ಮುಖ್ಯಮಂತ್ರಿಯಾಗುವ ಆಸೆ ಇದ್ದರೆ ಇಲ್ಲೇ ಆಗಲಿ. ಲಕ್ಷಾಂತರ ಜನರ ಹೋರಾಟದಿಂದ ಸೃಷ್ಟಿಯಾಗಿರುವ ಅಖಂಡ ಕರ್ನಾಟಕವನ್ನು ಒಡೆಯುವ ಮಾತು ಬೇಡವೆಂದು ಕಿವಿಮಾತು ಹೇಳಿ, ಬಹುಕಾಲದಿಂದ ನೀವೇ ಅಲ್ಲಿ ಅಧಿಕಾರದಲ್ಲಿದ್ದು, ಈಗ ಉತ್ತರ ಕರ್ನಾಟಕ ಅಭಿವೃದ್ಧಿ ಆಗಲಿಲ್ಲ ಅಂದರೆ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.
BIG NEWS: ಗ್ರಾಮ ಪಂಚಾಯತ್ ಅಧ್ಯಕ್ಷ ಆಕಾಂಕ್ಷಿ ಕಿಡ್ನಾಪ್; 7 ಜನರ ವಿರುದ್ಧ FIR ದಾಖಲು
ಇನ್ನು ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತಂತೆ ಮಾತನಾಡಿದ ಹೆಚ್.ಸಿ. ಮಹಾದೇವಪ್ಪ, ಈ ಸರ್ಕಾರಕ್ಕೆ ಕಿವಿ ಕೇಳಿಸುವುದಿಲ್ಲ. ಕಣ್ಣೂ ಕಾಣುವುದಿಲ್ಲ. ದಪ್ಪ ಚರ್ಮದ ಸರ್ಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಕೋಮುವಾದದ ಅಫೀಮನ್ನು ಪಠ್ಯ ಪುಸ್ತಕದಲ್ಲಿ ಸೇರಿಸುತ್ತಿದೆ. ಇವರಿಗೆ ಬಸವಣ್ಣ, ಅಂಬೇಡ್ಕರ್, ಕುವೆಂಪು, ಕನಕದಾಸ ಸೇರಿದಂತೆ ನಾಡಿನ ಮಹನೀಯರ ಬಗ್ಗೆ ಗೌರವವೇ ಇಲ್ಲ ಎಂದು ಕಿಡಿ ಕಾರಿದರು.