ಪೊಲೀಸರೆಂದರೆ ದರ್ಪ ಮೆರೆಯುವವರು, ಸಾರ್ವಜನಿಕರಿಗೆ ಕಿರುಕುಳ ಕೊಡುವವರು ಎಂಬ ನಂಬಿಕೆ ಬಹುತೇಕ ಜನಸಾಮಾನ್ಯರಲ್ಲಿದೆ. ಆದರೆ ಅವರೂ ನಮ್ಮಂತೆ ಮನುಷ್ಯರು. ಅವರಲ್ಲೂ ಮಾನವೀಯತೆ ಇದೆ ಎಂಬ ಸಂಗತಿ ಆಗಾಗ ಬೆಳಕಿಗೆ ಬರುತ್ತದೆ. ಇದಕ್ಕೆ ಸೇರ್ಪಡೆ ಎಂಬಂತೆ ಇಲ್ಲೊಂದು ಸ್ಟೋರಿ ಇದೆ.
ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆಯ ಪಕ್ಕದಲ್ಲಿ ವೃದ್ದೆಯರಿಬ್ಬರು ಕಳೆದ ಹದಿನೈದು ವರ್ಷಗಳಿಂದ ತಗಡಿನ ಶೆಡ್ ನಲ್ಲಿ ಹೋಟೆಲ್ ನಡೆಸುತ್ತಿದ್ದರು. ಈ ವೃದ್ಧೆಯರ ಪತಿ ಒಬ್ಬರೇ ಆಗಿದ್ದು ಅವರು ತೀರಿಕೊಂಡಿದ್ದಾರೆ. ಜೊತೆಗೆ ಮಗ ಹಾಗೂ ಮಗಳು ಸಹ ನಿಧನರಾಗಿದ್ದು, ಹೀಗಾಗಿ ವೃದ್ಧಾಪ್ಯದಲ್ಲಿ ಯಾರಿಗೂ ಹೊರೆಯಾಗದಂತೆ ಇವರು ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸಿದ್ದರು.
ಕುಂಸಿ ಪೊಲೀಸ್ ಠಾಣೆಯ ಬಹುತೇಕ ಸಿಬ್ಬಂದಿ ಈ ಹೋಟೆಲ್ ಗ್ರಾಹಕರಾಗಿದ್ದು, ಶಿಥಿಲಾವಸ್ಥೆಯಲ್ಲಿದ್ದ ಈ ಹೋಟೆಲ್ ಬೀಳುವ ಹಂತದಲ್ಲಿರುವುದನ್ನು ಕುಂಸಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ ಗಮನಿಸಿದ್ದಾರೆ. ಇವರುಗಳಿಗೆ ನೆರವಾಗಬೇಕೆಂಬ ಸಂಕಲ್ಪ ಮಾಡಿದ ಅವರು ತಮ್ಮ ಸಿಬ್ಬಂದಿಯ ನೆರವಿನೊಂದಿಗೆ ಹಣ ಹಾಕಿ ಹೋಟೆಲ್ ಮೇಲ್ಚಾವಣಿಯನ್ನು ಬದಲಾಯಿಸಿದ್ದಾರೆ.
ಪೊಲೀಸರು ಮಾಡಿರುವ ಈ ಮಾನವೀಯ ಕಾರ್ಯ ಈಗ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.