
ಬೀದಿ ದೀಪದ ಕೆಳಗೆ ಕುಳಿತು ಕಷ್ಟಪಟ್ಟು ಓದಿ ದೊಡ್ಡ ದೊಡ್ಡ ವಿದ್ವಾಂಸರಾಗಿರುವವರ ಬಗ್ಗೆ ಕೇಳಿದ್ದೇವೆ. ಇಲ್ಲೊಬ್ಬ ಬಾಲಕಿ ಕೂಡ ಅದೇ ರೀತಿ ಬೀದಿ ದೀಪದ ಕೆಳಗೆ ಕುಳಿತು ಓದುತ್ತಿರುವ ವಿಡಿಯೋ ವೈರಲ್ ಆಗಿದ್ದು, ಜನರನ್ನು ಭಾವುಕರನ್ನಾಗಿಸುತ್ತಿದೆ.
ಶ್ರೀಮಂತ ಕುಟುಂಬಗಳ ಮಕ್ಕಳು ಹೆಸರಾಂತ ಶಾಲೆಗಳಿಗೆ ಪ್ರವೇಶ ಪಡೆಯಬಹುದು, ಅತ್ಯುತ್ತಮ ಶಿಕ್ಷಕರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಬಹುದು. ಆದರೆ ಬಡತನದಲ್ಲಿ ಬೆಳೆದ ಮಕ್ಕಳಿಗೆ ಬೀದಿ ದೀಪಗಳೇ ಶಿಕ್ಷಣ, ಸರ್ಕಾರಿ ಶಾಲೆಗಳೇ ಅವರಿಗೆ ಆಧಾರ. ಇಂಥ ಕಷ್ಟದಲ್ಲಿ ಕಲಿತ ಮಕ್ಕಳೇ ಮುಂದೆ ಉನ್ನತ ಹುದ್ದೆಯನ್ನೇರುವುದು, ದೇಶಕ್ಕೆ ಕೀರ್ತಿ ತರುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಈ ಬಾಲಕಿಗೆ ಈಗ ಜಾಲತಾಣದಲ್ಲಿ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.
ಚಲಿಸುವ ವಾಹನದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ, ಶಾಲೆಗೆ ಹೋಗುವ ಹುಡುಗಿಯೊಬ್ಬಳು ಪಾದಚಾರಿ ಮಾರ್ಗದ ಮೇಲೆ ಕುಳಿತು ಓದುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವಳು ತನ್ನ ನೋಟ್‌ಬುಕ್‌ನಲ್ಲಿ, ಬೀದಿದೀಪಗಳ ಕೆಳಗೆ ಏನನ್ನೋ ಬರೆಯುತ್ತಿರುವುದು ಕಾಣಿಸುತ್ತದೆ. ರಸ್ತೆಗಳಲ್ಲಿ ವಾಹನಗಳ ಗಲಾಟೆಯ ನಡುವೆಯೂ ಅವಳ ಏಕಾಗ್ರತೆ ಅಚಲ. ಅಧ್ಯಯನಶೀಲ ಹುಡುಗಿ ತನ್ನ ಕೆಲಸದಲ್ಲಿ ಮಗ್ನಳಾಗಿದ್ದು, ತಲೆ ಎತ್ತಿ ಕೂಡ ನೋಡುತ್ತಿಲ್ಲ. ಈಕೆ ಯಾರು ಎಂದು ತಿಳಿಯದಿದ್ದರೂ ನೆಟ್ಟಿಗರು ಮನತುಂಬಿ ಆಕೆಯ ಆಶೀರ್ವಾದ ಮಾಡುತ್ತಿದ್ದಾರೆ.