ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವ ಒಂದು ಅದ್ಭುತ ಕ್ಷಣ. ಇಲ್ಲಿ ಸಂತೋಷ, ತಮಾಷೆ, ಮೋಜು-ಮಸ್ತಿ ಎಲ್ಲಾ ಇರುತ್ತದೆ. ಆದರೆ, ಯಾವಾಗಲೂ ನಾವಂದುಕೊಂಡಂತೆ ಇರುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿ ಕೈ ಮೀರಿ ಹೋಗಬಹುದು. ಕೆಲವೊಮ್ಮೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಬಹುದು. ಇದೀಗ ನಡೆದಿದ್ದು ಕೂಡ ಇಂಥದ್ದೆ ಘಟನೆ..
ಸಂಭ್ರಮದಿಂದ ಹಾಡುತ್ತಾ, ನೃತ್ಯ ಮಾಡಬೇಕಿದ್ದ ಮದುವೆ ಆರಕ್ಷತೆಯಲ್ಲಿ ಭಾರಿ ಬೀದಿ ಕಾದಾಟ ನಡೆದಿರುವ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ. ಗೊಂದಲದ ಗೂಡಾದ ಆರತಕ್ಷತೆಯಲ್ಲಿ ಹಲವಾರು ಅತಿಥಿಗಳು ರಸ್ತೆಯಲ್ಲಿ ಜಗಳವಾಡಿದ್ದಾರೆ. ಪರಸ್ಪರ ಒಬ್ಬರಿಗೊಬ್ಬರು ಹೊಡೆದುಕೊಂಡು, ಎಳೆದಾಡಿದ್ದಾರೆ. ಆಘಾತಕಾರಿ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋ ವೈರಲ್ ಆಗಿದೆ.
ಸಿಡ್ನಿಯ ಮೊಸ್ಮನ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. 30ಕ್ಕೂ ಹೆಚ್ಚು ಮಂದಿ ನಡೆಸಿದ ಬೀದಿ ಕಾದಾಟದಲ್ಲಿ ವ್ಯಕ್ತಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಕೂಡ ನಡೆದಿದೆ. ಇದನ್ನು ನೋಡಿದ ಅಲ್ಲಿದ್ದ ಕೆಲವರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ, ಈ ಗುಂಪು ಯಾವ ವಿಚಾರಕ್ಕೆ ಜಗಳವಾಡಿದೆ ಎಂಬುದು ಮಾತ್ರ ತಿಳಿದು ಬಂದಿಲ್ಲ.