ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಕೆಲವರ ಬ್ಯಾಂಕ್ ಖಾತೆಗೆ ಲಕ್ಷದಿಂದ ಹಿಡಿದು ಕೋಟ್ಯಾಂತರ ರೂಪಾಯಿಗಳವರೆಗೆ ಜಮೆಯಾಗುತ್ತಿರುವ ಘಟನೆಗಳು ನಡೆದಿವೆ. ಹೀಗೆ ತಮ್ಮ ಖಾತೆಗೆ ಜಮೆಯಾದ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿಕೊಂಡು ವ್ಯಕ್ತಿಯೊಬ್ಬರು ಈಗ ಪರಿತಪಿಸುತ್ತಿದ್ದಾರೆ.
ಇದರ ಮಧ್ಯೆ ಬಿಹಾರದ ಕಟಿಯಾರ್ ಸಮೀಪದ ಗ್ರಾಮದ ವಿದ್ಯಾರ್ಥಿಯೊಬ್ಬನ ಬ್ಯಾಂಕ್ ಖಾತೆಗೆ ಬರೋಬ್ಬರಿ 900 ಕೋಟಿ ರೂಪಾಯಿ ಜಮೆ ಆಗಿದ್ದರೆ, ಮತ್ತೊಬ್ಬ ವಿದ್ಯಾರ್ಥಿ ಖಾತೆಗೆ 6 ಕೋಟಿ ರೂಪಾಯಿ ಜಮಾ ಆಗಿತ್ತು. ಇದೀಗ ಇಂತಹುದೇ ಮತ್ತೊಂದು ಘಟನೆ ನಡೆದಿದೆ.
ಬಿಹಾರದ ಮುಜಾಫರ್ ಜಿಲ್ಲೆ ಸಿಂಗಾರಿ ಗ್ರಾಮದ ರೈತ ರಾಮ್ ಬಹದ್ದೂರ್ ಶಾ ಅವರ ಬ್ಯಾಂಕ್ ಖಾತೆಗೆ 52 ಕೋಟಿ ರೂಪಾಯಿ ಆಗಿದ್ದು, ಇದನ್ನು ತಿಳಿದು ಅವರು ಅಚ್ಚರಿಗೊಂಡಿದ್ದಾರೆ. ತಾನೊಬ್ಬ ಬಡ ರೈತನಾಗಿದ್ದು, ಇಷ್ಟೊಂದು ದೊಡ್ಡ ಮೊತ್ತವನ್ನು ಕನಸಿನಲ್ಲೂ ಕಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ತಾಂತ್ರಿಕ ದೋಷದಿಂದ ಹೀಗೆ ಆಗಿರಬಹುದೆಂದು ಹೇಳಲಾಗಿದ್ದು, ಅದನ್ನು ಸರಿಪಡಿಸುವ ಕಾರ್ಯದಲ್ಲಿ ಬ್ಯಾಂಕ್ ಅಧಿಕಾರಿಗಳು ತೊಡಗಿದ್ದಾರೆ.