
ಹೌದು, ಅಚ್ಚರಿಯಾದರೂ ಇದು ಸತ್ಯ ಸಂಗತಿ. ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಮದುವೆ ವಯಸ್ಸಿಗೆ ಬಂದ ವರರನ್ನು ಮಾರಾಟ ಮಾಡಲಾಗುತ್ತದೆ. ತಮ್ಮ ಪುತ್ರಿಯರೊಂದಿಗೆ ಆಗಮಿಸುವ ಪೋಷಕರು ಸೂಕ್ತ ಬೆಲೆ ನೀಡಿ ಅವರನ್ನು ಖರೀದಿಸಿದ ಬಳಿಕ ಮದುವೆ ನೆರವೇರಿಸುತ್ತಾರೆ.
ಸ್ಥಳೀಯವಾಗಿ ಇದನ್ನು ‘ಸೌರತ್ ಸಭಾ’ ಎಂದು ಕರೆಯಲಾಗುತ್ತಿದ್ದು, 9 ದಿನಗಳ ಕಾಲ ಈ ಖರೀದಿ ಪ್ರಕ್ರಿಯೆ ನಡೆಯುತ್ತದೆ. ವರರನ್ನು ಅವರ ಶಿಕ್ಷಣ ಹಾಗೂ ಕುಟುಂಬದ ಹಿನ್ನೆಲೆ ಆಧಾರದ ಮೇಲೆ ಬೆಲೆ ನಿಗದಿಪಡಿಸಲಾಗುತ್ತದೆ. ವರರೂ ಸಹ ಸಾಂಪ್ರದಾಯಿಕ ಉಡುಪಾದ ಧೋತಿ – ಕುರ್ತಾ ಅಥವಾ ಜೀನ್ಸ್ – ಶರ್ಟ್ ಧರಿಸಿ ತಮ್ಮ ಪೋಷಕರೊಂದಿಗೆ ಆಗಮಿಸುತ್ತಾರೆ.
ತಾವು ಆಯ್ಕೆ ಮಾಡಿಕೊಂಡ ವರನಿಗೆ ಬೆಲೆ ನಿಗದಿಪಡಿಸುವ ಮುನ್ನ ವಧುವಿನ ಪೋಷಕರು ಆತನ ಹಿನ್ನೆಲೆಯನ್ನು ಪರಿಶೀಲಿಸುತ್ತಾರೆ. ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿ ಪತ್ರಗಳನ್ನು ಸಹ ಪರಿಶೀಲಿಸುತ್ತಾರೆ. ವಧು ಒಪ್ಪಿಗೆ ಸೂಚಿಸಿದ ಬಳಿಕ ನಿಗದಿಪಡಿಸಿದ ಬೆಲೆ ನೀಡಿ ಆ ವರನೊಂದಿಗೆ ತಮ್ಮ ಪುತ್ರಿಯ ವಿವಾಹವನ್ನು ನೆರವೇರಿಸುತ್ತಾರೆ.
700 ವರ್ಷಗಳ ಹಿಂದೆ ಕರ್ನಾಟ್ ರಾಜ ವಂಶಸ್ಥರ ಆಳ್ವಿಕೆ ಕಾಲದಲ್ಲಿ ಇದನ್ನು ಆರಂಭಿಸಲಾಯಿತು ಎಂದು ಹೇಳಲಾಗಿದ್ದು, ವಿವಿಧ ಗೋತ್ರದವರೊಂದಿಗೆ ಮದುವೆ ನೆರವೇರಲಿ ಎಂಬ ಕಾರಣಕ್ಕೆ ರಾಜ ಹರಿಸಿಂಗ್ ಆರಂಭಿಸಿರಬಹುದು ಎನ್ನಲಾಗಿದೆ.