ಬಿಸಿ ಅನ್ನಕ್ಕೆ ಗೊಜ್ಜು ಹಾಕಿಕೊಂಡು ಊಟ ಮಾಡಿದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಸಾರು, ಸಾಂಬಾರು ಮಾಡುವುದಕ್ಕೆ ಬೇಜಾರು ಅನ್ನುವವರು ಒಮ್ಮೆ ಈ ಹಸಿಮೆಣಸಿನಕಾಯಿ ಗೊಜ್ಜು ಮಾಡಿಕೊಂಡು ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು:
ಹಸಿಮೆಣಸು – 8, ಎಣ್ಣೆ – 1 ಟೇಬಲ್ ಸ್ಪೂನ್, ಸಾಸಿವೆ – ½ ಟೀ ಸ್ಪೂನ್, ತೆಂಗಿನಕಾಯಿ ತುರಿ – 1 ಕಪ್, ಕಡಲೆಬೇಳೆ – 1/2 ಟೇಬಲ್ ಸ್ಪೂನ್, ಉದ್ದಿನ ಬೇಳೆ – 1/4 ಟೀ ಸ್ಪೂನ್, ಬ್ಯಾಡಗಿ ಮೆಣಸು – 1, ಅರಿಶಿನ – ¼ ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಕರಿಬೇವು – 10 ಎಸಳು, ಇಂಗು – ಚಿಟಿಕೆ, ಬೆಲ್ಲ – 3 ಟೇಬಲ್ ಸ್ಪೂನ್, ಹುಣಸೆಹಣ್ಣು – ನೆಲ್ಲಿಕಾಯಿ ಗಾತ್ರದಷ್ಟು, ನೀರು – 1 ½ ಕಪ್.
ಮಾಡುವ ವಿಧಾನ:
ಒಂದು ಮಿಕ್ಸಿ ಜಾರಿಗೆ ಹಸಿಮೆಣಸು, ತೆಂಗಿನಕಾಯಿ ತುರಿ, ¼ ಟೀ ಸ್ಪೂನ್ ಸಾಸಿವೆ ಹಾಕಿ ರುಬ್ಬಿಕೊಂಡು ಮತ್ತೆ ಸ್ವಲ್ಪ ನೀರು ಸೇರಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ¼ ಟೀ ಸ್ಪೂನ್ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು, ಇಂಗು, ಒಣಮೆಣಸು ಹಾಕಿ ನಂತರ ಅರಿಶಿನ ಹಾಕಿ ರುಬ್ಬಿಕೊಂಡ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ನೆನೆಹಾಕಿದ ಹುಣಸೆಹಣ್ಣಿನ ರಸ, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಇದು ಗೊಜ್ಜಿನ ಹದಕ್ಕೆ ಬಂದಾಗ ಗ್ಯಾಸ್ ಆಫ್ ಮಾಡಿ.