ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಚಳಿಗಾಲದಲ್ಲಿ ಬಿಸಿನೀರು ಸ್ನಾನ ಮಾಡುತ್ತಲೇ ಇರಬೇಕು ಎನಿಸುತ್ತದೆ. ಬಿಸಿನೀರು ಸ್ನಾನದಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳೂ ಇವೆ. ಅದೇ ರೀತಿ ಅತಿಯಾದ ಬಿಸಿ ನೀರಲ್ಲಿ ಸ್ನಾನ ಮಾಡುವುದರಿಂದ ದೇಹದ ಮೇಲೆ ದುಷ್ಪರಿಣಾಮಗಳೂ ಆಗುತ್ತವೆ. ಈ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಅತಿಯಾದ ಬಿಸಿ ನೀರು ನಮ್ಮ ತ್ವಚೆಗೆ ಮತ್ತು ಕೂದಲಿಗೆ ಹಾನಿಕಾರಕ. ಇದಲ್ಲದೇ ಅತಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಅಧಿಕ ರಕ್ತದೊತ್ತಡದಂತಹ ಗಂಭೀರ ಸಮಸ್ಯೆಗಳಿಗೂ ಬಲಿಯಾಗಬಹುದು.
ಚರ್ಮಕ್ಕೆ ಹಾನಿಕಾರಕ: ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವ ಅಭ್ಯಾಸವಿದ್ದರೆ ಅದನ್ನು ಬದಲಾಯಿಸಿಕೊಳ್ಳುವುದು ಒಳಿತು. ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮವು ಒಣಗುತ್ತದೆ. ಇದು ತುರಿಕೆ, ರಿಂಗ್‌ವಾರ್ಮ್‌ನಂತಹ ಸಮಸ್ಯೆಗೆ ಕಾರಣವಾಗಬಹುದು. ನೀವು ಬಿಸಿ ನೀರಿನಿಂದ ಸ್ನಾನ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದರೆ ಸ್ನಾನದ ನಂತರ ಮಾಯಿಶ್ಚರೈಸರ್ ಬಳಸಿ. ತ್ವಚೆ ಶುಷ್ಕವಾಗದಂತೆ ಕಾಳಜಿ ವಹಿಸಿ.
ಕೂದಲು ಉದುರುತ್ತದೆ: ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಕೂದಲು ಕೂಡ ಶುಷ್ಕವಾಗುತ್ತದೆ. ಇದರಿಂದಾಗಿ ಒಣ ನೆತ್ತಿ ಮತ್ತು ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಇದನ್ನು ತಪ್ಪಿಸಲು ಸ್ನಾನ ಮಾಡುವ ಮೊದಲು ತಲೆ ಮತ್ತು ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಕೂದಲು ತೀವ್ರ ಶುಷ್ಕವಾಗುವುದಿಲ್ಲ.
ರಕ್ತದೊತ್ತಡ: ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ ಅತಿಯಾದ ಬಿಸಿ ನೀರಿನ ಸ್ನಾನ ಬೇಡ.
ಬೆನ್ನು ನೋವು: ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಬೆನ್ನು ನೋವಿನ ತೊಂದರೆ ಕಾಣಿಸಿಕೊಳ್ಳಬಹುದು. ಬಿಸಿ ನೀರಿನ ಸ್ನಾನದಿಂದ ಸ್ನಾಯುಗಳು ಬಿಗಿಯಾಗುತ್ತವೆ. ಇದರಿಂದಾಗಿ ಬೆನ್ನುನೋವು ಬರುತ್ತದೆ.
ನಿರ್ಜಲೀಕರಣ: ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಡಿಹೈಡ್ರೇಶನ್ ಉಂಟಾಗಬಹುದು. ಅತಿಯಾದ ಬೆವರುವಿಕೆಯಿಂದ ನಿರ್ಜಲೀಕರಣ ಉಂಟಾಗುವ ಸಾಧ್ಯತೆ ಇರುತ್ತದೆ.