ಸೌರವ್ ಗಂಗೂಲಿ ಅವರಿಂದ ತೆರವಾಗಲಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದ ರೋಜರ್ ಬಿನ್ನಿ ಇಂದು ನಡೆಯಲಿರುವ ಸಭೆಯಲ್ಲಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಎಂ. ಚಿನ್ನಸ್ವಾಮಿ ನಂತರ ಈ ಸ್ಥಾನಕ್ಕೆ ಏರಿದ ಕರ್ನಾಟಕದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ರೋಜರ್ ಬಿನ್ನಿಯವರದ್ದಾಗಲಿದೆ.
1983ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ ಇಂದು ನಡೆಯಲಿರುವ ಬಿಸಿಸಿಐ ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 36ನೇ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಎದುರಾಳಿಯಾಗಿ ಯಾರೂ ಕಣದಲ್ಲಿ ಇಲ್ಲದ ಕಾರಣ ಎಲ್ಲ ಪದಾಧಿಕಾರಿಗಳು ಸಹ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಅಲ್ಲದೆ ಈ ಆಯ್ಕೆ ಬಳಿಕ ಸಭೆ ನಡೆಸಲಿರುವ ನೂತನ ಪದಾಧಿಕಾರಿಗಳು, ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿಸಿಸಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಅಥವಾ ಹಾಲಿ ಅಧ್ಯಕ್ಷ ಗ್ರೇಗ್ ಬಾರ್ ಕ್ಲೈ ಅವರನ್ನೇ ಎರಡನೇ ಅವಧಿಗೆ ಮುಂದುವರೆಸಲು ಬೆಂಬಲಿಸಬೇಕೆಂಬ ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ.