ಬಿಸಿಸಿಐ ಪದಾಧಿಕಾರಿ ಹುದ್ದೆಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ನಾಮಪತ್ರ ಸಲ್ಲಿಸಿದ್ದಾರೆ.
ಈ ಇಬ್ಬರೇ ನಾಮಪತ್ರ ಸಲ್ಲಿಸಿರುವ ಕಾರಣ ಇವರ ಆಯ್ಕೆ ಬಹುತೇಕ ಖಚಿತವಾಗಿದ್ದು, ಇದರ ಮಧ್ಯೆ ಕಳೆದ ಅವಧಿಗೆ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಈ ಬಾರಿ ಕಣಕ್ಕಿಳಿಯದಿರುವುದು ಅಚ್ಚರಿ ಮೂಡಿಸಿದೆ.
ಕಳೆದ ಅವಧಿಯಂತೆ ಈ ಬಾರಿಯೂ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಯುತ್ತಾರೆ ಎಂದು ಭಾವಿಸಲಾಗಿತ್ತಾದರೂ ಈಗ ಜಯ್ ಶಾ ಮಾತ್ರ ಮರು ಆಯ್ಕೆಯಾಗುತ್ತಿದ್ದಾರೆ.
ಇದೀಗ ಸೌರವ್ ಗಂಗೂಲಿ ಮರು ಆಯ್ಕೆಯಾಗದಿರುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ವೇಳೆ ಸೌರವ್ ಗಂಗೂಲಿ, ಬಿಜೆಪಿ ಸೇರದಿರುವುದರಿಂದ ಸೇಡಿನ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಆದರೆ ಇದನ್ನು ನಿರಾಕರಿಸಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್, ಬಿಜೆಪಿ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಎಂದಿಗೂ ಬಯಸಿರಲಿಲ್ಲ. ಟಿಎಂಸಿ ಪ್ರತಿಯೊಂದು ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ದೂರಿದ್ದಾರೆ.