ದೇಶದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದೆ. ಜನರು ಸೂರ್ಯನ ಪ್ರತಾಪಕ್ಕೆ ಬಳಲಿ ಬೆಂಡಾಗಿದ್ದಾರೆ. ಈ ಬೇಸಿಗೆಯ ಬೇಗೆಯಲ್ಲಿ ಸ್ಥಳೀಯರ ಬಾಯಾರಿಕೆಯನ್ನು ನೀಗಿಸಲು ಯುವಕನೊಬ್ಬ ಜನ-ಪರ ಕಾಳಜಿ ತೋರಿದ್ದಾನೆ.
ಹೌದು, ಕೋಲ್ಕತ್ತಾದ ಯುವಕನೊಬ್ಬ ತನ್ನ ವೈಯಕ್ತಿಕ ರೆಫ್ರಿಜರೇಟರ್ ಅನ್ನು ಬೀದಿಯಲ್ಲಿ ಸ್ಥಾಪಿಸಿದ್ದಾನೆ. ಕೋಲ್ಕತ್ತಾ ನಗರದಲ್ಲಿ ಬಾಯಾರಿಕೆಯನ್ನು ನೀಗಿಸಲು ರಸ್ತೆಯ ಬದಿಯಲ್ಲಿ ತಾತ್ಕಾಲಿಕವಾಗಿ ರೆಫ್ರಿಜರೇಟರ್ ಅನ್ನು ಇದೇ ಮೊದಲ ಬಾರಿ ಸ್ಥಾಪಿಸಲಾಗಿದೆ ಎಂದು ಫೇಸ್ಬುಕ್ ನಲ್ಲಿ ಹಂಚಿಕೊಳ್ಳಲಾಗಿದೆ.
ಅಲಿಮುದ್ದೀನ್ ಸ್ಟ್ರೀಟ್‌ನ 29 ವರ್ಷದ ಸ್ಥಳೀಯ ನಿವಾಸಿ ತೌಸಿಫ್ ರೆಹಮಾನ್, ತನ್ನ ಫ್ರಿಡ್ಜ್ ಅನ್ನು 28 ದಿನಗಳವರೆಗೆ ತನ್ನ ಮನೆಯ ಹೊರಗೆ ಇಟ್ಟುಕೊಂಡಿದ್ದಾನೆ. ದಾರಿಹೋಕರಿಗೆ ದಿನಕ್ಕೆ 30 ಕ್ಕೂ ಹೆಚ್ಚು ಪ್ಯಾಕ್ ಮಾಡಲಾದ ಕುಡಿಯುವ ನೀರಿನ ಬಾಟಲಿಗಳನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಡಲಾಗಿದೆ. ಬಿಸಿಲಿನ ತಾಪದಲ್ಲಿ ಹಾದುಹೋಗುವ ಜನರಿಗೆ ಉಚಿತವಾಗಿ ತಂಪಾದ ನೀರು ಒದಗಿಸುವುದು ಈತನ ಗುರಿಯಾಗಿದೆ.
ಯುವಕನ ಜನಪರ ಕಾಳಜಿಯನ್ನು ಗಮನಿಸಿದ ಸ್ಥಳೀಯರು ಸಹ ಇತರರಿಗೆ ಕುಡಿಯಲು ಖಾಲಿ ಬಾಟಲಿಗಳಲ್ಲಿ ನೀರು ತುಂಬಿಸಲು ಆರಂಭಿಸಿದ್ದಾರೆ.