ಪಾಟ್ನಾ: ದೇಶದೆಲ್ಲೆಡೆ ಬಿಸಿಲಿನ ಝಳ ಜನರನ್ನು ಹೈರಾಣಗೊಳಿಸಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲನ್ನು ತಡೆದುಕೊಳ್ಳುವುದೇ ಜನರಿಗೆ ದುಸ್ತರವಾಗಿದೆ. ದೆಹಲಿ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಗರಿಷ್ಟ ತಾಪಮಾನ 45 ಡಿಗ್ರಿವರೆಗೂ ತಲುಪಿದೆ. ಒಟ್ಟಿನಲ್ಲಿ ಮನೆಯಿಂದ ಹೊರಗೆ ಹೋಗದಂತಹ ಪರಿಸ್ಥಿತಿಯನ್ನು ಬಿಸಿಲಿನ ಬೇಗೆ ತಂದೊಡ್ಡಿದೆ. ಈ ಸಮಯದಲ್ಲಿ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ವ್ಯಾಪಾರ ಮಾಡುವ ವ್ಯಕ್ತಿಯವರೆಗೂ ಬಿಸಿಲನ್ನು ತಡೆದುಕೊಳ್ಳಲಾಗುತ್ತಿಲ್ಲ.
ಇಂತಹ ವೇಳೆ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ತಮ್ಮನ್ನು ಬಿಸಿಲಿನಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕೆಂದು ಹಾಡಿನ ಮೂಲಕ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ಶಾಲಾ ಶಿಕ್ಷಕನ ಹಾವ-ಭಾವ, ಹಾಡುವ ಶೈಲಿ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ಬಿಸಿಲು ಇದೀಗ ಎಲ್ಲರು ಎದುರಿಸುತ್ತಿರುವ ದೊಡ್ಡ ಅಂಶ. ಇದರಿಂದ ಮಕ್ಕಳನ್ನು ರಕ್ಷಿಸುವುದು ಬಹಳ ಮುಖ್ಯ. ಇದಕ್ಕೆ ನಮ್ಮ ಸರ್ಕಾರವೂ ಪ್ರಯತ್ನಿಸುತ್ತಿದೆ. ನಮ್ಮ ಮಕ್ಕಳು ಶಾಖದ ಪರಿಣಾಮದಿಂದ ರಕ್ಷಿಸಲು ವಿನೂತನ ಪ್ರಯೋಗ ಮಾಡಿದ ಶಿಕ್ಷಕ ಬೈದ್ಯನಾಥ ರಜಾಕ್ಪ್ರಾ. ಬಾಲಕಿಯರ ಶಾಲೆ ಮಾಲ್ದಾ, ಹಸನ್ ಪುರ, ಸಮಸ್ತಿಪುರ ಎಂದು ಟೀಚರ್ಸ್ ಆಫ್ ಬಿಹಾರ್ ಎಂಬ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಲಾಗಿದೆ.
ಬಾಲಿವುಡ್ ನಟ ಗೋವಿಂದ ಅವರ ಕೂಲಿ ನಂ. ಒನ್ ಸಿನಿಮಾದ ಹಾಡನ್ನು ಬಳಸಿ ಸುಂದರ ಹಾಡನ್ನು ಕಟ್ಟಿದ್ದಾರೆ ಈ ಬಿಹಾರದ ಶಿಕ್ಷಕ. ತುಂಬಾ ಬಿಸಿಲಿದ್ದರೆ ಹೊರಗೆ ಹೋಗಬೇಡಿ. ಛತ್ರಿ ಬಳಸಿ, ನೀರಿನ ಬಾಟಲಿ ತನ್ನಿ ಕುಡಿಯುವ ನೀರನ್ನು ಇಟ್ಟುಕೊಳ್ಳಿ ಎಂದು ಹಾಡುವ ಮೂಲಕ ಬಿಸಿಲಿನ ವೇಳೆ ಸ್ವಯಂ ರಕ್ಷಣೆ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ವಿವರಿಸಿದ್ದಾರೆ. ಶಿಕ್ಷಕರ ಹಾಡು, ವಿವರಣಾ ಶೈಲಿ ಕಂಡಉ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವುದನ್ನು ಕಾಣಬಹುದು.