ದೆಹಲಿ ಜನತೆ ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿದ್ದಾರೆ. ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಸೆಖೆ ತಾಳಲಾರದೇ ಜನರು ಪರದಾಡುವಂತಾಗಿದೆ. ನಗರದ ತಾಪಮಾನ ಸರಿಸುಮಾರು 45 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಮಧ್ಯಾಹ್ನದ ನಂತರ ರಸ್ತೆಗಳಲ್ಲಿ ಓಡಾಡೋದು ಕೂಡ ದುಸ್ತರವಾಗಿಬಿಟ್ಟಿದೆ.
ಪ್ರಯಾಣಿಕರಿಗೆ ಅನುಕೂಲವಾಗಲಿ ಅಂತಾನೇ ಆಟೋ ಚಾಲಕ ಮಹೇಂದ್ರ ಕುಮಾರ್ ಎಂಬಾತ ವಿಶಿಷ್ಟ ಪ್ರಯೋಗವೊಂದನ್ನು ಮಾಡಿದ್ದಾರೆ. ಬಿಸಿಲಿನ ತಾಪದಿಂದ ಪ್ರಯಾಣಿಕರನ್ನು ರಕ್ಷಿಸಲು ಆಟೊ ರಿಕ್ಷಾದ ಛಾವಣಿಯ ಮೇಲೆ ಉದ್ಯಾನವನ ನಿರ್ಮಿಸಿದ್ದಾರೆ. ಪರಿಚಯಸ್ಥರು ಮತ್ತು ನರ್ಸರಿಗಳಿಂದ ಬೀಜಗಳನ್ನು ಪಡೆದು, ಆಟೋ ಮೇಲ್ಭಾಗದಲ್ಲಿ ಚಾಪೆ ಹಾಸಿ ಅದರ ಮೇಲೆ ಮಣ್ಣನ್ನು ಹಾಕಿ ಆ ಬೀಜಗಳನ್ನು ಬಿತ್ತಿದ್ದಾರೆ, ಈಗ ಆಟೋ ಮೇಲ್ಭಾಗದಲ್ಲೇ ಸುಂದರವಾದ ಗಿಡಗಳು ಬೆಳೆದಿವೆ.
ಸುಮಾರು 2 ವರ್ಷಗಳ ಹಿಂದೆ ಬಿರು ಬೇಸಿಗೆಯಲ್ಲಿ ಈ ರೀತಿ ಉದ್ಯಾನವನ ನಿರ್ಮಿಸುವ ಆಲೋಚನೆ ಮಹೇಂದ್ರ ಕುಮಾರ್‌ಗೆ ಬಂದಿತ್ತು. ಮೇಲ್ಛಾವಣಿಯಲ್ಲಿ ಒಂದಿಷ್ಟು ಸಸಿಗಳನ್ನು ನೆಟ್ಟರೆ ನನ್ನ ಆಟೊ ತಂಪಾಗಿರುತ್ತದೆ, ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೂ ಬಿಸಿಲಿನಿಂದ ಪರಿಹಾರ ಸಿಗುತ್ತದೆ ಎಂದು ಈ ಹೊಸ ಪ್ರಯೋಗಕ್ಕೆ ಕೈಹಾಕಿದೆ ಎಂದು ಮಹೇಂದ್ರ ಕುಮಾರ್ ಹೇಳಿದ್ದಾರೆ. ಮಹೇಂದ್ರ ಕುಮಾರ್ ಅವರ ಈ ಐಡಿಯಾ ವರ್ಕೌಟ್ ಆಗಿದೆ.
ಈ ಉದ್ಯಾನವನ ಮಾಡಿದ್ಮೇಲೆ ಮೊದಲಿಗಿಂತ ಹೆಚ್ಚು ಸವಾರರನ್ನು ಈ ಆಟೋ ಆಕರ್ಷಿಸುತ್ತಿದೆ. ಜನರು ಫೋಟೋ, ವಿಡಿಯೋ ಕೂಡ ತೆಗೆದುಕೊಳ್ತಿದ್ದಾರೆ. ದೆಹಲಿಯಲ್ಲಿರೋ ಸಾವಿರಾರು ಆಟೋಗಳ ಮಧ್ಯೆ ಮಹೇಂದ್ರ ಕುಮಾರ್ ಅವರ ಗಾರ್ಡನ್ ಆಟೋ ವಿಭಿನ್ನವಾಗಿ ಗುರುತಿಸಿಕೊಳ್ತಿದೆ. ತಮ್ಮ ಆಟೋದಲ್ಲಿ 2 ಮಿನಿ ಕೂಲರ್ ಹಾಗೂ ಫ್ಯಾನ್ ಗಳನ್ನು ಕೂಡ ಈತ ಅಳವಡಿಸಿದ್ದಾರೆ. ಆಟೋ ಮೇಲ್ಛಾವಣಿಯಲ್ಲಿ ಸುಮಾರು 20 ಬಗೆಯ ಗಿಡಗಳನ್ನು ಬೆಳೆಸಿದ್ದಾರೆ, ಈ ಮೂಲಕ ಪರಿಸರ ರಕ್ಷಣೆಗೂ ಕೊಡುಗೆ ನೀಡ್ತಿರೋದು ವಿಶೇಷ.