ಬಿಲ್ವ ಪತ್ರೆ ಎಂದಾಕ್ಷಣ ನಿಮಗೆ ಈಶ್ವರನ ನೆನಪಾಗುತ್ತಿದೆಯೇ, ಶಿವನ ಮೂರು ಕಣ್ಣುಗಳಿಗೆ ಹೋಲಿಸುವ ಈ ಎಲೆಗೆ ಪೂಜನೀಯ ಗೌರವವಿದೆ.
ಅಷ್ಟಮಿಯ ದಿನ ಕೃಷ್ಣನಿಗೆ ಅರ್ಘ್ಯ ಬಿಡಲು ಹೆಚ್ಚಿನ ಮನೆಗಳಲ್ಲಿ ಬಿಲ್ವಪತ್ರೆ ಎಲೆಗಳನ್ನೇ ಬಳಸುತ್ತಾರೆ.
ಇದರ ಹೊರತಾಗಿ ಬಿಲ್ವಪತ್ರೆಯಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬುದು ನಿಮಗೆ ಗೊತ್ತೇ…? ಇದರಲ್ಲಿ ಬ್ಯಾಕ್ಟೀರಿಯಾ ಧ್ವಂಸ ಮಾಡುವ ಗುಣವಿದೆ. ಇದರ ಹಣ್ಣು, ಕಾಯಿ, ಹೂವು, ಕಾಂಡ ಎಲ್ಲವೂ ಔಷಧೀಯ ರೂಪದಲ್ಲಿ ಬಳಕೆಯಾಗುತ್ತದೆ.
ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ಈ ಸೊಪ್ಪನ್ನು ಬಳಸಿ. ತ್ವಚೆಯ ಸಮಸ್ಯೆಗಳಾದ ತುರಿಕೆ, ಕಜ್ಜಿಗೆ ಬಿಲ್ವಪತ್ರೆ ಎಲೆಗಳ ರಸ ಹಿಂಡಿ ಅದನ್ನು ಹಚ್ಚಿದರೆ ಅಲರ್ಜಿ ಸಮಸ್ಯೆ ದೂರವಾಗುತ್ತದೆ. ಬಾಯಿಯಲ್ಲಿ ಹುಣ್ಣಾಗಿದ್ದರೆ ಎರಡು ಬಿಲ್ವಪತ್ರೆ ಚಿಗುರನ್ನು ಬಾಯಿಯಲ್ಲಿ ಜಗಿದು ನೋಡಿ. ಹುಣ್ಣಿನ ಸಮಸ್ಯೆ ದೂರವಾಗುತ್ತದೆ.
ಜಂಕ್ ಫುಡ್ ತಿಂದು ಹೊಟ್ಟೆ ಅಜೀರ್ಣವಾಗಿದ್ದರೆ ಬಿಲ್ವಪತ್ರೆ ಎಲೆಯ ಕಷಾಯ ನೆರವಾಗುತ್ತದೆ. ಎದೆಯಲ್ಲಿ ಕಫ ತುಂಬಿ ಕೆಮ್ಮು ಬರುತ್ತಿದ್ದರೆ ಬಿಲ್ವಪತ್ರೆ ಎಲೆಯನ್ನು ಜಜ್ಜಿ ಅದರನ್ನು ಎದೆಗೆ ಹಚ್ಚುವುದರಿಂದ ದಮ್ಮಿನ ಸಮಸ್ಯೆ ಸ್ವಲ್ಪ ಕಡಿಮೆಯಾಗುತ್ತದೆ.
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ನಿತ್ಯ ಎರಡು ಬಿಲ್ವಪತ್ರೆ ಎಲೆಗಳನ್ನು ಎರಡು ತಿಂಗಳ ತನಕ ಸೇವಿಸಿ ನೋಡಿ. ಡಯಾಬೀಟಿಸ್ ರೋಗಿಗಳೂ ಇದೇ ನಿಯಮವನ್ನು ಪಾಲಿಸಿ. ಇದರ ಕಷಾಯವನ್ನು ಕುಡಿಯಬಹುದು. ಇದರಿಂದ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಾಧ್ಯ.