ದೇಶದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದರೆ, ಇತ್ತ ಬೆಂಗಳೂರಿನಲ್ಲಿ ಬಿರುಬೇಸಿಗೆಯಲ್ಲೂ ಗಿರಿಧಾಮಗಳ ರೀತಿಯಲ್ಲಿ ತಂಪಾದ ವಾತಾವರಣ ದಾಖಲಾಗುತ್ತಿದೆ.
ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಬಿಸಿ ಹವೆ ಇದ್ದು, ದೆಹಲಿಯಲ್ಲಿ ಹಗಲಿನ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಪಂಜಾಬ್, ಹರಿಯಾಣ ಮತ್ತು ವಿದರ್ಭಗಳಲ್ಲಿಯೂ ಬೇಸಿಗೆಯ ಬಿಸಿ ಏರಲಿದೆ.
ಮತ್ತೊಂದೆಡೆ, ಉದ್ಯಾನನಗರಿ ಬೆಂಗಳೂರಿನಲ್ಲಿ ತಂಗಾಳಿ ಬೀಸುತ್ತಿದೆ. ಬುಧವಾರ ನಗರದಲ್ಲಿ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಸಾಮಾನ್ಯಕ್ಕಿಂತ 11 ಡಿಗ್ರಿಯಷ್ಟು ಕಡಿಮೆ ದಾಖಲಾದ ತಾಪಮಾನವಾಗಿದೆ. ಅಸಾನಿ ಚಂಡಮಾರುತದ ಪರಿಣಾಮ ನಗರದಲ್ಲಿ ದಿನಂಪ್ರತಿ ಮಳೆ ಸುರಿಯುತ್ತಿರುವುದರಿಂದ ತಂಪಾದ ವಾತಾವರಣ ನಿರ್ಮಾಣವಾಗಿದೆ. ಈ ಮೂಲಕ ಶಿಮ್ಲಾ, ಮಸ್ಸೂರಿಯಂತಹ ಗಿರಿಧಾಮಗಳಿಗಿಂತ ತಂಪಾದ ವಾತಾವರಣ ಇಲ್ಲಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದ್ದು, ಅನೇಕ ಟ್ವಿಟ್ಟರ್ ಬಳಕೆದಾರರು ವೆದರ್ ಆ್ಯಪ್ ಗಳಲ್ಲಿ ಬರುವ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅನೇಕ ಬಳಕೆದಾರರು ವಾಸ್ತವ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಯೋಚಿಸುತ್ತಿದ್ದೇವೆ ಎಂದು ತಿಳಿಸಿದ್ದರೆ, ಈಗಾಗಲೇ ನಾವು ನಮ್ಮ ಲಗೇಜ್ ಗಳನ್ನು ಪ್ಯಾಕ್ ಮಾಡಿದ್ದೇವೆ ಎಂದು ಇನ್ನಿತರರು ಹೇಳಿಕೊಂಡಿದ್ದಾರೆ.