
ಪಾರ್ಟಿಗಳಲ್ಲಿ ಕುಡಿಯಲು ಮಾತ್ರ ಬಿಯರ್ ಬಳಸಲಾಗುವುದಿಲ್ಲ. ಬಿಯರ್ ಸೌಂದರ್ಯ ವರ್ಧಕ ಕೂಡ ಹೌದು. ಇದ್ರಲ್ಲಿರುವ ಆಲ್ಕೋಹಾಲ್ ರಂಧ್ರವನ್ನು ಸ್ವಚ್ಛಗೊಳಿಸಿ ಚರ್ಮ ಹೊಳಪು ಪಡೆಯಲು ನೆರವಾಗುತ್ತದೆ.ಅವಶ್ಯಕತೆಗೆ ಅನುಗುಣವಾಗಿ ಬಿಯರ್ ಬಳಸುವುದು ದೇಹಕ್ಕೆ ಮತ್ತು ಚರ್ಮಕ್ಕೆ ಎರಡಕ್ಕೂ ಒಳ್ಳೆಯದು.
ಮುಖದ ಮೇಲೆ ಕಪ್ಪು ಕಲೆ ಅಥವಾ ಬಿಳಿ ಕಲೆಯಿದ್ದರೆ ಚಿಂತೆ ಬೇಡ. ಮೂರು ಸ್ಟ್ರಾಬೆರಿ ಚೂರನ್ನು ಮೂರರಿಂದ ನಾಲ್ಕು ಹನಿ ಬಿಯರ್ ಜೊತೆ ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಅದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತ್ರ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಇದನ್ನು ಹಚ್ಚುವುದ್ರಿಂದ ನೀವು ಶಾಶ್ವತವಾಗಿ ಕಪ್ಪು ಹಾಗೂ ಬಿಳಿ ಕಲೆ ಸಮಸ್ಯೆಯಿಂದ ಹೊರ ಬರಬಹುದು.
ಎಣ್ಣೆಯುಕ್ತ ಚರ್ಮವಿರುವವರು 2 ಚಮಚ ಆಲಿವ್ ಆಯಿಲ್, 2 ಚಮಚ ಜೇನುತುಪ್ಪ, ಒಂದು ಚಮಚ ನಿಂಬೆ ರಸ ಹಾಗೂ ಸ್ವಲ್ಪ ಬಿಯರ್ ಮಿಕ್ಸ್ ಮಾಡಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಹೀಗೆ ಮಾಡುತ್ತ ಬಂದ್ರೆ ಉತ್ತಮ ಫಲಿತಾಂಶ ಸಿಗಲಿದೆ.
ಮುಖ ದಣಿವಾದಂತೆ ಕಾಣುತ್ತಿದ್ದರೆ ಒಂದು ಚಮಚ ಬಿಯರ್ ಗೆ ಒಂದು ಮೊಟ್ಟೆ, 2 ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ. ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಮುಖಕ್ಕೆ ಹಚ್ಚಿ. ಕೆಲ ಸಮಯ ಬಿಟ್ಟು ಮುಖವನ್ನು ತೊಳೆದ್ರೆ ಮುಖ ಫ್ರೆಶ್ ಆಗಿ ಕಾಣುತ್ತದೆ.
ಮೊಡವೆ ಸಮಸ್ಯೆಯಿರುವವರು 1 ಮೊಟ್ಟೆ, 2 ಚಮಚ ಜೇನುತುಪ್ಪ, ಬಿಯರ್ ನ ಕೆಲ ಹನಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆದುಕೊಳ್ಳಿ. ಕತ್ತು, ಬೆನ್ನಿಗೆ ಕೂಡ ಈ ಪೇಸ್ಟ್ ಬಳಸಬಹುದು.