ಆರೋಗ್ಯ ವಿಮೆ ಮಾಡಿಸಿಕೊಂಡಿದ್ದ ಹಿರಿಯ ನಾಗರಿಕರೊಬ್ಬರು, ಕ್ಯಾನ್ಸರ್ ಪೀಡಿತರಾದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಆ ಬಳಿಕ ಹಣ ಪಾವತಿಸಲು ವಿಮಾ ಕಂಪನಿಗೆ ಮನವಿ ಮಾಡಿದ್ದರು. ಆದರೆ, ಅವರಿಗೆ ಬಿಪಿ – ಶುಗರ್ ಇದೆ ಹಾಗೂ ಆರೋಗ್ಯ ವಿಮೆ ಮಾಡಿಸಿಕೊಂಡ ಸಂದರ್ಭದಲ್ಲಿ ಇದನ್ನು ಮುಚ್ಚಿಟ್ಟಿದ್ದರು ಎಂಬ ಕಾರಣಕ್ಕೆ ವಿಮಾ ಕಂಪನಿ ಹಣ ಪಾವತಿಸಲು ನಿರಾಕರಿಸಿತ್ತು. ಈ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ಬೆಂಗಳೂರು ನಗರ ಒಂದನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯ, ದೂರುದಾರರು, ಆರೋಗ್ಯ ವಿಮಾ ಕಂಪನಿಗೆ ಪಾವತಿಸಲು ಕೋರಿದ್ದ 5 ಲಕ್ಷ ರೂಪಾಯಿಗಳನ್ನು ವಾರ್ಷಿಕ ಶೇಕಡಾ 12 ಬಡ್ಡಿ ಸಹಿತ ಮರುಪಾವತಿಸುವಂತೆ ಆದೇಶಿಸಿದೆ. ಅಲ್ಲದೆ ಆರೋಗ್ಯ ವಿಮಾ ಕಂಪನಿಗೆ ಒಂದು ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ. ಜೊತೆಗೆ ವ್ಯಾಜ್ಯದ ವೆಚ್ಚವಾಗಿ ಹತ್ತು ಸಾವಿರ ರೂಪಾಯಿಗಳನ್ನು ಪಾವತಿಸಬೇಕೆಂದು ಸೂಚಿಸಲಾಗಿದೆ.
ಪ್ರಕರಣದ ವಿವರ: ಹಿರಿಯ ನಾಗರಿಕರೊಬ್ಬರು ತಾವು ಸೇರಿದಂತೆ ಇಡೀ ಕುಟುಂಬಕ್ಕೆ ಆರೋಗ್ಯ ವಿಮೆ ಪಡೆದುಕೊಂಡಿದ್ದು, 2018ರಲ್ಲಿ ಅನಾರೋಗ್ಯಕ್ಕೀಡಾದ ವೇಳೆ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಆಗ ಅವರಿಗೆ ಬೆವರಿನ ಗ್ರಂಥಿಯ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಬಳಿಕ ಖಾಸಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ಅವರು ಆರೋಗ್ಯ ವಿಮಾ ಕಂಪನಿಯಿಂದ 5 ಲಕ್ಷ ರೂಪಾಯಿಗಳ ವಿಮೆ ಕ್ಲೈಂ ಮಾಡಿದ್ದರು.
ಆದರೆ ಅವರು ವಿಮೆ ಮಾಡಿಸಿಕೊಂಡ ಸಂದರ್ಭದಲ್ಲಿ ಬಿಪಿ ಹಾಗೂ ಶುಗರ್ ಇದ್ದರೂ ಸಹ ಇದನ್ನು ಮುಚ್ಚಿಟ್ಟಿದ್ದರು ಎಂಬ ಕಾರಣಕ್ಕೆ ಆರೋಗ್ಯ ವಿಮಾ ಕಂಪನಿ ಹಣ ಪಾವತಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹಿರಿಯ ನಾಗರಿಕರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ತೀರ್ಪು ಹೊರಬಿದ್ದಿದ್ದು, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ವನ್ನು ಕಾಯಿಲೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಗ್ರಾಹಕ ನ್ಯಾಯಾಲಯ, ಹೀಗಾಗಿ ಆರೋಗ್ಯ ವಿಮೆಯನ್ನು ಪಾವತಿಸುವಂತೆ ಕಂಪನಿಗೆ ಆದೇಶಿಸಿದೆ.