ಬೆಂಗಳೂರು: ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಟ್ವೀಟ್ ಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಟ್ ಕಾಯಿನ್ ಹಗರಣ ಯಾರ ಕಾಲದಲ್ಲಿಯೇ ನಡೆದಿರಲಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಟ್ ಕಾಯಿನ್ ಹಗರಣ ಯಾರ ಕಾಲದಲ್ಲಿಯೇ ಆಗಿರಲಿ, ನಮ್ಮ ಅವಧಿಯನ್ನೂ ಸೇರಿಸಿ ನ್ಯಾಯಾಂಗ ತನಿಖೆ ನಡೆಸಲಿ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿ ಹಗರಣದ ತನಿಖೆ ನಡೆಸಲಿ. ಯಾರು ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದರು.
ಐರನ್ ಮ್ಯಾನ್ ಸೂಟ್ ನಿರ್ಮಿಸಿದ ಮಣಿಪುರದ ವಿದ್ಯಾರ್ಥಿಗೆ ಉದ್ಯಮಿ ಆನಂದ್ ಮಹೀಂದ್ರಾ ಸಹಾಯಹಸ್ತ
ಬಿಟ್ ಕಾಯಿನ್ ವಿಚಾರವಾಗಿ ತಮ್ಮ ಮಗನ ಬಗ್ಗೆ ಪರೋಕ್ಷವಾಗಿ ಟ್ವೀಟ್ ಮಾಡಿರುವ ಬಿಜೆಪಿ ಬಗ್ಗೆ ಕಿಡಿಕಾರಿದ ಸಿದ್ದರಾಮಯ್ಯ, ರಾಕೇಶ್ ಈಗ ಬದುಕಿಲ್ಲ. ಸತ್ತವರ ಬಗ್ಗೆ ಆರೋಪ ಮಾಡಿ ಮಾತನಾಡುವವರಿಗೆ ಮಾನ ಮರ್ಯಾದೆ ಇಲ್ಲ. ಬಿಜೆಪಿಯವರು ಅನಗತ್ಯವಾಗಿ ಹಗರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ಶ್ರೀಕಿಯನ್ನು ಬಳಸಿಕೊಂಡು ನಲಪಾಡ್ ಯುವ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್ ಮಾಡಿಸಿದ್ದರು ಎಂಬ ಗೃಹ ಸಚಿವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಹ್ಯಾಕಿಂಗ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.