ಕಡಲೆಬೇಳೆ ವಡೆ ಆಗಾಗ ಮಾಡಿರುತ್ತೀರಿ. ಇಲ್ಲಿ ಬಿಟ್ರೂಟ್ ಸೇರಿಸಿ ಮಾಡಬಹುದಾದ ಒಂದು ರುಚಿಕರವಾದ ವಡೆಯ ವಿಧಾನ ಇದೆ. ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ. ಸುಲಭವಾಗಿ ಮಾಡಿಬಿಡಬಹುದು ಈ ‘ಬಿಟ್ರೂಟ್ ವಡೆ’
ಬೇಕಾಗುವ ಸಾಮಗ್ರಿಗಳು:
½ ಕಪ್ – ಕಡಲೆಬೇಳೆ, ½ ಕಪ್ – ತೊಗರಿಬೇಳೆ, 2 – ಒಣಮಣಸು, 1 ಕಪ್ ಬಿಟ್ರೂಟ್ ತುರಿದಿದ್ದು, ½ – ಈರುಳ್ಳಿ ಸಣ್ಣಗೆ ಹಚ್ಚಿದ್ದು, 3 ಟೇಬಲ್ ಸ್ಪೂನ್ – ಕೊತ್ತಂಬರಿಸೊಪ್ಪು ಸಣ್ಣಗೆ ಹಚ್ಚಿದ್ದು, 2 ಹಸಿ ಮೆಣಸು – ಸಣ್ಣಗೆ ಹಚ್ಚಿದ್ದು, ½ ಟೀ ಸ್ಪೂನ್ – ಶುಂಠಿ ಪೇಸ್ಟ್, ಕರಿಬೇವು – ಸ್ವಲ್ಪ, 1 ಟೀ ಸ್ಪೂನ್ – ಜೀರಿಗೆ, ¾ ಟೀ ಸ್ಪೂನ್-ಉಪ್ಪು, 2 ಟೇಬಲ್ ಸ್ಪೂನ್ – ಅಕ್ಕಿ ಹಿಟ್ಟು, ಎಣ್ಣೆ – ಕರಿಯಲು.
ಮಾಡುವ ವಿಧಾನ:
ಒಂದು ದೊಡ್ಡ ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆಬೇಳೆ, ತೊಗರಿಬೇಳೆ, ಒಣಮೆಣಸು ಹಾಕಿ ಇದು ನೆನೆಯಲು ಬೇಕಾಗುವಷ್ಟು ನೀರು ಸೇರಿಸಿ 2 ಗಂಟೆಗಳ ಕಾಲ ನೆನೆಸಿ. ನಂತರ ಇದರ ನೀರನ್ನು ಸೋಸಿಕೊಳ್ಳಿ. ಸೋಸಿಟ್ಟುಕೊಂಡ ಮಿಶ್ರಣವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ರುಬ್ಬಿ ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ.
ಇದಕ್ಕೆ ತುರಿದ ಬಿಟ್ರೂಟ್, ಈರುಳ್ಳಿ, ಕೊತ್ತಂಬರಿಸೊಪ್ಪು, ಶುಂಠಿ, ಕರಿಬೇವು,ಜೀರಿಗೆ, ಇಂಗು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅಕ್ಕಿ ಹಿಟ್ಟು ಸೇರಿಸಿ. ಕೈಗೆ ನೀರು ಸವರಿಕೊಂಡು ವಡೆ ರೀತಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಕೆಂಪಗಾಗುವವರೆಗೆ ಕರಿಯಿರಿ.