ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಸಿಹಿ ಕೇಳುತ್ತಾ ಇರುತ್ತಾರೆ. ಹಾಗಾಗಿ ಆರೋಗ್ಯಕರವಾದ ಸಿಹಿ ತಿನಿಸುಗಳನ್ನು ಅವರಿಗೆ ಮಾಡಿಕೊಟ್ಟರೆ ಖುಷಿಯಾಗುತ್ತಾರೆ. ಇಲ್ಲಿ ಸುಲಭವಾಗಿ ಮಾಡಬಹುದಾದಂತಹ ಬಿಟ್ರೂಟ್-ಕೊಕೊನಟ್ ಬರ್ಫಿ ಇದೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಬಿಟ್ರೂಟ್ ತುರಿ, 1 ಕಪ್ – ತೆಂಗಿನಕಾಯಿ ತುರಿ, ಸಕ್ಕರೆ – 1.5 ಕಪ್, ತುಪ್ಪ – 1/4 ಕಪ್, ಗೋಡಂಬಿ – 2 ಟೇಬಲ್ ಸ್ಪೂನ್, ಏಲಕ್ಕಿ ಪುಡಿ – 1 ಟೀ ಸ್ಪೂನ್.
ಮಾಡುವ ವಿಧಾನ:
ಪ್ಯಾನ್ ಗೆ ತುಪ್ಪ ಹಾಕಿ ಗ್ಯಾಸ್ ಮೇಲೆ ಇಟ್ಟು ಅದರಲ್ಲಿ ಗೋಡಂಬಿ ಹುರಿದುಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ನಂತರ ಪ್ಯಾನ್ ಗೆ ಬಿಟ್ರೂಟ್, ತೆಂಗಿನಕಾಯಿ ತುರಿ ಸೇರಿಸಿ 5 ನಿಮಿಷಗಳ ಕಾಲ ಹುರಿಯಿರಿ. ಇದರ ಹಸಿ ವಾಸನೆ ಹೋಗಲಿ. ನಂತರ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಸಕ್ಕರೆ ಕರಗಿದ ಮೇಲೆ ಮಿಶ್ರಣ ದಪ್ಪಗೆ ಆಗುತ್ತದೆ. ಇದು ತಳ ಬಿಡುತ್ತಿದ್ದಂತೆ ಏಲಕ್ಕಿ ಪುಡಿ, ಗೋಡಂಬಿ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.
ತಟ್ಟೆಗೆ ತುಪ್ಪ ಸವರಿ ಈ ಮಿಶ್ರಣವನ್ನು ಅದರ ಮೇಲೆ ಹಾಕಿ ಸಮತಟ್ಟು ಮಾಡಿಕೊಳ್ಳಿ. 10 ನಿಮಿಷ ಬಿಟ್ಟು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.