ಈ ಬಾರಿಯ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆದಿದ್ದು, ಫಲಿತಾಂಶದ ಕುರಿತು ಪ್ರತಿಕ್ಷಣಕ್ಕೂ ಕುತೂಹಲ ಹೆಚ್ಚುತ್ತಿದೆ. ಕಳೆದ ಬಾರಿ ಸ್ವತಃ ಬಲದ ಮೇಲೆ ಅಧಿಕಾರಕ್ಕೆ ಏರುವಷ್ಟು ಸ್ಥಾನಗಳನ್ನು ಪಡೆದಿದ್ದ ಬಿಜೆಪಿಗೆ ಸದ್ಯದ ಅಂಕಿ – ಅಂಶಗಳಂತೆ ಒಂದಷ್ಟು ಹಿನ್ನಡೆಯಾಗಿದೆ. ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟಕ್ಕೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಭರ್ಜರಿ ಪೈಪೋಟಿ ನೀಡುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಹಾಗೂ ಕಾರ್ಯಕರ್ತರ ಪ್ರಚಾರಕ್ಕಿಂತ ಸಾಮಾಜಿಕ ಜಾಲತಾಣಗಳು ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದವಾ ಎಂಬ ಚರ್ಚೆ ಈಗ ಆರಂಭವಾಗಿದೆ. ಇದಕ್ಕೆ ಪೂರಕವೆಂಬಂತೆ ಹರಿಯಾಣದಲ್ಲಿ ಹತ್ತಕ್ಕೆ ಹತ್ತೂ ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಆಘಾತ ಎದುರಾಗಿದೆ.
ಅದರಲ್ಲೂ ಎರಡು ಕೋಟಿಗೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಖ್ಯಾತ ಯೂಟ್ಯೂಬರ್ ಹರಿಯಾಣ ಮೂಲದ ದೃವ್ ರಾಠಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ನಿರಂತರವಾಗಿ ವಿಡಿಯೋಗಳನ್ನು ಹಾಕುತ್ತಿದ್ದರು. ಹರಿಯಾಣ ಸೇರಿದಂತೆ ಇತರೆ ರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ಇದು ಕೂಡ ಪರಿಣಾಮ ಬೀರಿದೆಯಾ ಎಂಬ ಕುತೂಹಲ ಎಲ್ಲರಲ್ಲಿದೆ.