ಆಜಾನ್ ಮೈಕ್ ತೆರವುಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಇಂದು ಸಂಘಟನೆಯ ಕಾರ್ಯಕರ್ತರೊಂದಿಗೆ ಹುಬ್ಬಳ್ಳಿಯ ಮಧುರಾ ಎಸ್ಟೇಟ್ ನಲ್ಲಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿವಾಸದೆದುರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋರ್ಟ್ ಆದೇಶದಂತೆ ಮೈಕ್ ತೆರವುಗೊಳಿಸುವಂತೆ ನಾವು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ 60 ಸಾವಿರಕ್ಕೂ ಅಧಿಕ ಮೈಕ್ ಗಳನ್ನು ತೆರವುಗೊಳಿಸಿದೆ. ಆದರೆ ರಾಜ್ಯದಲ್ಲಿ ಈ ಕಾರ್ಯ ಆಗುತ್ತಿಲ್ಲ ಎಂದು ಗುಡುಗಿದರು.
ಇದೇ ರೀತಿ ಬಸವರಾಜ ಬೊಮ್ಮಾಯಿ ಸರ್ಕಾರದ ಧೋರಣೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಶಾಸಕರ ಮನೆ ಮುಂದೆ ಲೌಡ್ ಸ್ಪೀಕರ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರಮೋದ್ ಮುತಾಲಿಕ್, ಇವರುಗಳಿಗೆ ಹಿಂದೂಗಳು ಬೇಕು ಆದರೆ ಹಿಂದೂತ್ವ ಬೇಡ. ಸಂಘ ಬೇಕು ಆದರೆ ಸಂಘದ ಸಿದ್ದಾಂತಗಳು ಬೇಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.