ಶಿವಸೇನೆ ಶಾಸಕರ ಬಂಡಾಯದಿಂದಾಗಿ ಮಹಾರಾಷ್ಟ್ರದ ‘ಮಹಾ ವಿಕಾಸ್ ಅಘಾಡಿ’ ಸರ್ಕಾರ ಪತನಗೊಂಡಿದ್ದು, ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಎಲ್ಲರ ಎಣಿಕೆಯಾಗಿತ್ತು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ದೇವೇಂದ್ರ ಫಡ್ನವಿಸ್ ಉಪಮುಖ್ಯಮಂತ್ರಿಯಾಗಿದ್ದಾರೆ.
ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಲಿ ಎಂಬ ಸೂಚನೆ ಬಿಜೆಪಿ ಕೇಂದ್ರ ನಾಯಕರಿಂದ ಬರುತ್ತಿದ್ದಂತೆಯೇ ಈ ಸರ್ಕಾರದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದರು. ಆ ಬಳಿಕ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಇದೀಗ ದೇವೇಂದ್ರ ಫಡ್ನವಿಸ್ ಅವರ ನಡೆಯೊಂದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಮರಳಿ ಅಧಿಕಾರಕ್ಕೆ ಬಂದಿದ್ದಕ್ಕೆ ಬಿಜೆಪಿ ವತಿಯಿಂದ ಸಂಭ್ರಮಾಚರಣೆ ಆಯೋಜಿಸಲಾಗಿದ್ದು, ಇದಕ್ಕೆ ದೇವೇಂದ್ರ ಫಡ್ನವಿಸ್ ಗೈರು ಹಾಜರಾಗಿದ್ದಾರೆ.
ಅಲ್ಲದೆ ಇಂದಿನಿಂದ ಹೈದರಾಬಾದಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ದೇವೇಂದ್ರ ಫಡ್ನವೀಸ್ ಅದಕ್ಕೂ ಹಾಜರಾಗುತ್ತಿಲ್ಲವೆಂದು ಹೇಳಲಾಗಿದೆ. ತಾವೇ ಮತ್ತೆ ಮುಖ್ಯಮಂತ್ರಿಯಾಗುವ ವಿಶ್ವಾಸ ಹೊಂದಿದ್ದ ದೇವೇಂದ್ರ ಫಡ್ನವೀಸ್, ಬಿಜೆಪಿ ಕೇಂದ್ರ ನಾಯಕರ ತೀರ್ಮಾನದಿಂದ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.