ಶಹರಾನ್‌ಪುರ: ಬಿಜೆಪಿ ರ್ಯಾಲಿಯಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಮುಸ್ಲಿಂ ಯುವಕನಿಗೆ ಪೊಲೀಸ್ ರಕ್ಷಣೆ ನೀಡಲಾಗಿದೆ.
ಉತ್ತರ ಪ್ರದೇಶದ ಶಹರಾನ್‌ಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ರ್ಯಾಲಿಯಲ್ಲಿ ಮುಸ್ಲಿಂ ಯುವಕ ಜೈ ಶ್ರೀರಾಮ್ ಎಂಬ ಘೋಷಣೆ ಮಾಡಿದ್ದಾನೆ. ಡಿಸೆಂಬರ್ 2 ರಂದು ಶಹರಾನ್‌ಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜಂಟಿಯಾಗಿ ಭಾಷಣ ಮಾಡಿದ ರ್ಯಾಲಿಯಲ್ಲಿ ಎಹ್ಸಾನ್ ಜೈ ಶ್ರೀ ರಾಮ್ ಎಂದು ಕೂಗಿದ್ದಾನೆ. ಹೀಗಾಗಿ ಯುವಕನಿಗೆ ಬೆದರಿಕೆ ಸಂದೇಶಗಳು ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆತನಿಗೆ ಭದ್ರತೆಯನ್ನು ಒದಗಿಸಲಾಗಿದೆ.
ಬಿಜೆಪಿ ಬೆಂಬಲಿಗನಾಗಿರುವ ಎಹ್ಸಾನ್, ತನ್ನನ್ನು ಇಸ್ಲಾಂ ಧರ್ಮಕ್ಕೆ ವಿರುದ್ಧ ಎಂದು ಆರೋಪಿಸಿ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಭಗವಾನ್ ರಾಮನು ನಮ್ಮ ಪೂರ್ವಜ ಮತ್ತು ನಾವೆಲ್ಲರೂ ಶ್ರೀರಾಮನ ವಂಶಸ್ಥರು. ಜೈ ಶ್ರೀ ರಾಮ್ ಹೇಳಲು ಅಥವಾ ಭಾರತ್ ಮಾತಾ ಕೀ ಜೈ ಎಂದು ಹೇಳಲು ತನಗೆ ಯಾವುದೇ ಸಮಸ್ಯೆ ಇಲ್ಲ. ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ದಾರುಲ್ ಉಲೂಮ್ ದಿಯೋಬಂದ್‌ನ ಮೌಲಾನಾ ಮುಫ್ತಿ ಅಸಾದ್ ಖಾಸ್ಮಿ, ಎಹ್ಸಾನ್ ಘೋಷಣೆಯನ್ನು ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇಸ್ಲಾಂನಲ್ಲಿ ಇಂತಹ ಘೋಷಣೆಗಳನ್ನು ಎತ್ತಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಎಹ್ಸಾನ್ ತಾನು ಮಾಡಿರೋ ತಪ್ಪಿಗೆ ಪಶ್ಚಾತ್ತಾಪ ಪಡಬೇಕು ಎಂದು ಹೇಳಿದ್ದಾರೆ.
ಆದರೆ, ತನ್ನ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ದಾರುಲ್ ಉಲೂಮ್ ದಿಯೋಬಂದ್ ಮೌಲಾನಾ ಅವರ ಆದೇಶದ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಎಹ್ಸಾನ್ ಹೇಳಿದ್ದಾರೆ.