ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಟಿಕೆಟ್ ವಂಚಿತರು ಇತರೆ ಪಕ್ಷಗಳ ಕದ ಬಡಿಯತೊಡಗಿದ್ದಾರೆ. ಈಗಾಗಲೇ ಲಕ್ಷ್ಮಣ ಸವದಿ, ಎಂ.ಪಿ. ಕುಮಾರಸ್ವಾಮಿ ಬಿಜೆಪಿಯಿಂದ ಹೊರ ನಡೆದಿದ್ದು, ಇನ್ನೂ ಹಲವರು ಇದೇ ಹಾದಿ ಹಿಡಿಯಲು ಮುಂದಾಗಿದ್ದಾರೆ.
ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಯಡಿಯೂರಪ್ಪನವರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ತಮಗೆ ಅವಕಾಶ ಸಿಗದಿರುವ ಹಿನ್ನೆಲೆಯಲ್ಲಿ ಪಕ್ಷ ತೊರೆಯಲು ಮುಂದಾಗಿದ್ದಾರೆ.
ಶುಕ್ರವಾರ ರಾತ್ರಿ ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಎನ್.ಆರ್. ಸಂತೋಷ್ ಮಾತುಕತೆ ನಡೆಸಿದ್ದಾರೆ. ಸಂತೋಷ್ ಜೆಡಿಎಸ್ ಸೇರ್ಪಡೆಗೆ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದ್ದು, ಜೊತೆಗೆ ಸಂತೋಷ್ ಅರಸೀಕೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.