ತನ್ನ ಅಪಹರಣದ ಆರೋಪವನ್ನು ತಳ್ಳಿ ಹಾಕಿರುವ ಬಿಧುನ ಶಾಸಕ ವಿನಯ್ ಶಕ್ಯಾ ತಾವು ಸಮಾಜವಾದಿ ಪಕ್ಷವನ್ನು ಸೇರ್ಪಡೆಯಾಗುತ್ತಿರೋದಾಗಿ ಹೇಳಿದ್ದಾರೆ.
ತನ್ನ ಪುತ್ರಿ ರಿಯಾ ಶಕ್ಯಾ ತನ್ನ ತಂದೆಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ನೀಡಿದ್ದ ಹೇಳಿಕೆಯನ್ನು ತಳ್ಳಿ ಹಾಕಿದ ವಿನಯ್ ಶಕ್ಯಾ ತಾನು ಸಮಾಜವಾದಿ ಪಕ್ಷ ಸೇರ್ಪಡೆಯಾದ ಸ್ವಾಮಿ ಪ್ರಸಾದ್ ಮೌರ್ಯ ಜೊತೆಯಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.
ಮಂಗಳವಾರದಂದು ಶಕ್ಯಾ ಅವರ ಪುತ್ರಿ ರಿಯಾ ಶಕ್ಯಾ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೈಯಕ್ತಿಕ ರಾಜಕಾರಣಕ್ಕಾಗಿ ಚಿಕ್ಕಪ್ಪ ನನ್ನ ತಂದೆಯನ್ನು ಬಲವಂತವಾಗಿ ಲಕ್ನೋಗೆ ಕರೆದೊಯ್ದಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದರು.
ನನ್ನ ತಂದೆಗೆ ಕೆಲವು ವರ್ಷಗಳ ಹಿಂದೆ ಪಾರ್ಶ್ವವಾಯುವಾಗಿತ್ತು. ಇದಾದ ಬಳಿಕ ಅವರಿಗೆ ನಡೆಯಲು ಸಾಧ್ಯವಾಗಿಲ್ಲ ಎಂಬ ವಿಚಾರ ನಿಮಗೆಲ್ಲ ತಿಳಿದೇ ಇದೆ. ನನ್ನ ಚಿಕ್ಕಪ್ಪ ದೇವೇಶ್ ಶಕ್ಯಾ ಅವರ ಅನಾರೋಗ್ಯದ ಲಾಭವನ್ನು ಪಡೆದುಕೊಂಡು ಅವರ ಹೆಸರಿನಲ್ಲಿ ವೈಯಕ್ತಿಕ ರಾಜಕಾರಣ ಮಾಡಲು ಆರಂಭಿಸಿದ್ದಾರೆ. ಇಂದು ಎಲ್ಲ ಮಿತಿಗಳು ದಾಟಿ ನಮ್ಮ ತಂದೆಯನ್ನು ಬಲವಂತವಾಗಿ ಲಕ್ನೋಗೆ ಕರೆದೊಯ್ದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದರು.
ಸಮಾಜವಾದ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ತನ್ನ ತಂದೆಯನ್ನು ಲಕ್ನೋಗೆ ಬಲವಂತವಾಗಿ ಕರೆದುಕೊಂಡು ಹೋಗಿರುವ ಬಗ್ಗೆ ರಿಯಾ ಶಕ್ಯಾ ಮಾಡಿರುವ ಆರೋಪಗಳು ಆಧಾರ ರಹಿತ ಎಂದು ಔರೈಯಾ ಎಸ್ಪಿ ಅಭಿಷೇಕ್ ವರ್ಮಾ ಸ್ಪಷ್ಟನೆ ನೀಡಿದ್ದಾರೆ. ನಾನು ಶಾಸಕ ವಿನಯ್ ಶಕ್ಯಾ ಜೊತೆಯಲ್ಲಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದೇನೆ. ಅವರು ಪ್ರಸ್ತುತ ಅವರ ನಿವಾಸದಲ್ಲಿ ನೆಲೆಸಿದ್ದಾರೆ. ವಿನಯ್ ಶಾಕ್ಯಾ ಪುತ್ರಿಯ ಆರೋಪಗಳು ಆಧಾರ ರಹಿತ ಎಂದು ಹೇಳಿದ್ದಾರೆ.