ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸಂಪುಟಕ್ಕೆ ರಾಜೀನಾಮೆ ನೀಡಿ ಕೇವಲ ಒಂದೇ ದಿನದಲ್ಲಿ ಏಳು ವರ್ಷಗಳ ಹಿಂದಿನ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ. ಸುಲ್ತಾನ್ಪುರದ ಸಂಸದ -ಶಾಸಕ ನ್ಯಾಯಾಲಯವು ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.
2014ರಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿಯಲ್ಲಿದ್ದಾಗ ಕೋಮು ಭಾವನೆಗಳನ್ನು ಕೆರಳಿಸಿದ್ದರು ಎಂಬ ಆರೋಪದ ಅಡಿಯಲ್ಲಿ ಜನವರಿ 24ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ .
ಸ್ವಾಮಿ ಪ್ರಸಾದ್ ಮೌರ್ಯ 2014ರಲ್ಲಿ ಧಾರ್ಮಿಕ ಟೀಕೆಗಳಿಗೆ ಸಂಬಂಧಿಸಿದಂತೆ ಹಾಜರಾಗಬೇಕಿತ್ತು. ಅವರ ವಿರುದ್ಧ ಜಾಮೀನು ರಹಿತ ವಾರಂಟ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅದು ಜನವರಿ 6ರವರೆಗೆ ಮಾನ್ಯವಾಗಿದೆ. ಇಂದು ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಬರಲಿಲ್ಲ. ಮುಂದಿನ ವಿಚಾರಣೆಯು ಜನವರಿ 24ರಂದು ನಡೆಯಲಿದೆ ಎಂದು ವಕೀಲ ಅನಿಲ್ ತಿವಾರಿ ಹೇಳಿದ್ದಾರೆ.
ಇನ್ನು ಈ ಎಲ್ಲ ಬೆಳಗಣಿಗೆಗಳ ಬಗ್ಗೆ ನಗುತ್ತಾ ಪ್ರತಿಕ್ರಿಯಿಸಿದ ಮೌರ್ಯ ಇದಷ್ಟೇ ಅಲ್ಲ ಇನ್ನೂ ಹಲವು ವಿಚಾರಗಳು ಸದ್ಯದಲ್ಲೇ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಜನವರಿ 14ರಂದು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸೇರುವುದಾಗಿ ಸ್ವಾಮಿ ಪ್ರಸಾದ್ ಮೌರ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಮಂಗಳವಾರದಂದು ಸಮಾಜವಾದಿ ಪಕ್ಷವು ಸ್ವಾಮಿ ಪ್ರಸಾದ್ ಮೌರ್ಯರನ್ನು ಸ್ವಾಗತಿಸಿತ್ತು.