ಸೋಮವಾರ ಸಂಜೆಯಿಂದಲೇ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಇದರ ಮಧ್ಯೆ ಕರ್ನಾಟಕದ ಮತದಾರರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಕಳಿಸಿರುವ ವಿಡಿಯೋ ಸಂದೇಶವನ್ನು ಬಿಜೆಪಿ ತನ್ನ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು.
ಇದಕ್ಕೆ ತನ್ನ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬಳಿಕವೂ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರದಂದು ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ಇದು ಚುನಾವಣಾ ಆಯೋಗದ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದೆ.
ಈ ಕುರಿತಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗದ ನಿರ್ದೇಶನವನ್ನು ಉಲ್ಲಂಘಿಸಿರುವ ಪ್ರಧಾನಿ ಮೋದಿ ಅವರ ಕುರಿತು ಮೌನವಾಗಿರುವುದೇಕೆ ? ಕೂಡಲೇ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.