ಪಂಜಾಬ್ ವಿಧಾನಸಭಾ ಚುನಾವಣೆಯ ಗೆಲುವಿನ ಬಳಿಕ ಜೋಶ್ನಲ್ಲಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಇಂದು ಬಿಜೆಪಿಗೆ ಬಹಿರಂಗ ಸವಾಲೊಂದನ್ನು ಎಸೆದಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಿಯಾದ ಸಮಯಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದಲ್ಲಿ ಆಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಈ ವಿಚಾರವಾಗಿ ಹೇಳಿಕೆ ನೀಡಿದ ಕೇಜ್ರಿವಾಲ್, ಸಮಯಕ್ಕೆ ಸರಿಯಾಗಿ ಚುನಾವಣೆ ನಡೆದಲ್ಲಿ ಬಿಜೆಪಿಯನ್ನು ಆಮ್ ಆದ್ಮಿ ಪಕ್ಷವು ಕೆಳಗೆ ಇಳಿಸಲಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಆಪ್ ಸೋತರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲ್ ಎಸೆದಿದ್ದಾರೆ.
ಬಿಜೆಪಿಯು ತಮ್ಮದು ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳುತ್ತದೆ. ಆದರೆ ಬಿಜೆಪಿಯು ಸಣ್ಣ ಪಕ್ಷ ಹಾಗೂ ಸಣ್ಣ ಚುನಾವಣೆಯನ್ನು ಎದುರಿಸಲು ಹೆದರುತ್ತಿದೆ ಎಂದು ಹೇಳಿದರು.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿ ಮುಂದೂಡಿರುವುದು ಬ್ರಿಟಿಷರನ್ನು ದೇಶದಿಂದ ಓಡಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ತ್ಯಾಗ ಬಲಿದಾನ ಮಾಡಿದ ಹುತಾತ್ಮರಿಗೆ ಮಾಡಿದ ಅವಮಾನವಾಗಿದೆ, ಇಂದು ಬಿಜೆಪಿಯು ಸೋಲಿನ ಭಯದಿಂದ ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯನ್ನು ಮುಂದೂಡಿದೆ. ನಾಳೆ ಇವರು ರಾಜ್ಯ ಹಾಗೂ ಕೇಂದ್ರದ ಚುನಾವಣೆಗಳನ್ನೂ ಮುಂದೂಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. .