ಪಾಟೀದಾರ್ ಚಳುವಳಿಯ ಮೂಲಕ ದೇಶದ ಗಮನ ಸೆಳೆದ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಈಗ ತಮ್ಮದೇ ಪಕ್ಷವನ್ನು ತೆಗಳಿ ಬಿಜೆಪಿಯನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ.
ಗುಜರಾತ್ ಚುನಾವಣೆಗೆ ಇನ್ನೊಂದು ವರ್ಷವೂ ಇಲ್ಲದಿರುವಾಗ ಪಟೇಲ್ ಹೇಳಿಕೆ ಅಚ್ಚರಿ ಮೂಡಿಸಿದೆ. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ಸುಪ್ರಿಂ ಕೋರ್ಟ್‌ನಿಂದ ಅನುಮತಿ ಸಿಕ್ಕ ಒಂದು ದಿನದ ತರುವಾಯ ಈ ಹೇಳಿಕೆ ಹೊರಬಿದ್ದಿದೆ.
ಹಾರ್ದಿಕ್ ಪಟೇಲ್ ತಮ್ಮದೇ ಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಪಾಟಿದಾರ್ ಸಮುದಾಯದ ನಾಯಕರು ಮತ್ತು ಖೋಲ್ಧಾಮ್ ಟ್ರಸ್ಟ್ ಅಧ್ಯಕ್ಷ ನರೇಶ್ ಪಟೇಲ್ ಅವರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲು ಪಾಟಿದಾರ್ ಸಮುದಾಯ ಸಹಾಯ ಮಾಡಿದೆ. ಈಗ ಅದೇ ಪಾಟಿದಾರ್ ಮತ್ತು ಖೋಡಲ್ಧಾಮ್ ಟ್ರಸ್ಟ್ ಅಧ್ಯಕ್ಷ ನರೇಶ್ ಪಟೇಲ್ ಅವರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ, ನರೇಶ್ ಪಟೇಲ್ ರಾಜಕೀಯಕ್ಕೆ ಸೇರುವ ಕುರಿತು ನಾವು ತುಂಬಾ ಕೇಳಿದ್ದೇವೆ, ಪಕ್ಷವು ನಿರ್ಧಾರ ತೆಗೆದುಕೊಳ್ಳಲು ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ ? ಕಾಂಗ್ರೆಸ್, ನರೇಶ್ ಪಟೇಲ್ ಮತ್ತು ಪಾಟಿದಾರರನ್ನು ಏಕೆ ಅವಮಾನಿಸುತ್ತಿದೆ ? ಈ ನಿರ್ಧಾರವನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟವೇ ? ಎಂದು ಪ್ರಶ್ನೆ ಹಾಕಿದ್ದಾರೆ.
ಪಕ್ಷವು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ತಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಹೇಳುತ್ತಲೇ, ಬಿಜೆಪಿ ಸರ್ಕಾರದ ಕೆಲವು ತೀರ್ಮಾನವನ್ನು ಹೊಗಳಿ, ಆ ರಾಜ್ಯದ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಜನರ ಪರವಾಗಿ ಕೆಲಸ ಮಾಡಲು ನಾನು ಬಯಸುತ್ತೇನೆ ಎಂದು ಸಹ ಹೇಳಿದರು. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.