alex Certify ಬಿಜೆಪಿಯನ್ನು ಟೀಕೆ ಮಾಡುವವರು ಉದ್ದಾರ ಆಗುವುದಿಲ್ಲ; ಈಶ್ವರಪ್ಪ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಯನ್ನು ಟೀಕೆ ಮಾಡುವವರು ಉದ್ದಾರ ಆಗುವುದಿಲ್ಲ; ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರಿಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿರುವುದರಿಂದ ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚನ್ನಬಸಪ್ಪ ಅವರಿಗೆ ಎಲ್ಲಾ ಜನಾಂಗದವರು ಬೆಂಬಲಿಸುತ್ತಿರುವುದರಿಂದ ಕಳೆದ ಬಾರಿ 46 ಸಾವಿರಕ್ಕೂ ಹೆಚ್ಚು ಮತಗಳಿಂದ ನಾನು ಗೆಲುವು ಸಾಧಿಸಿದ್ದೆ. ಈ ಬಾರಿ ಅವರು 60 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಕಳೆದ ಐದು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಬೂತ್ ಮತ್ತು ಪೇಜ್ ಮಟ್ಟದಲ್ಲಿ ಪಕ್ಷದ ಸಂಘಟನೆ ಹಾಗೂ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಪಕ್ಷದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಚುನಾವಣೆಯ ಪ್ರಚಾರಕ್ಕಾಗಿ ಪಕ್ಷದ ವರಿಷ್ಠರು ಆಗಮಿಸುತ್ತಿರುವುದು ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ನಿನ್ನೆ ನಡೆದ ವಿವಿಧ ಸಮುದಾಯಗಳ ಸಭೆಯಲ್ಲಿ ಭಾಗವಹಿಸಿದ್ದಾರೆ. ನಿರೀಕ್ಷೆಗೂ ಮೀರಿ ಜನರು ಸೇರಿದ್ದರು. ಏ.30ರಂದು ಬೆಳಿಗ್ಗೆ 10-30ಕ್ಕೆ ಪೇಸ್ ಕಾಲೇಜಿನ ಹಿಂಭಾಗದಲ್ಲಿರುವ ಜಯಲಕ್ಷ್ಮಿ ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ಜೀ ಅವರು ವಿವಿಧ ಸಮುದಾಯಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮೇ 3ರಂದು ಸಂಜೆ 5 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿವಮೊಗ್ಗದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅದೇ ರೀತಿ ಮೇ 7ರಂದು ಆಯನೂರಿನಲ್ಲಿ ಜಿಲ್ಲೆಯ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ ಎಂದರು.

ಜನರ ಮನಸ್ಸನ್ನು ಗೆಲ್ಲುವುದು ಬಿಟ್ಟು ಕಾಂಗ್ರೆಸ್ ಸೋಲಿನ ಭೀತಿಯಿಂದ ಗೂಂಡಾಗಿರಿ ಮಾಡುತ್ತಿದೆ. ಅದನ್ನು ನಿಲ್ಲಿಸದಿದ್ದರೆ ಬಿಜೆಪಿ ತಕ್ಕ ಉತ್ತರ ನೀಡುತ್ತದೆ. ಪಕ್ಷದ ನಾಯಕರು ಕೆಟ್ಟ ಭಾಷೆಗಳನ್ನು ಬಳಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದನ್ನು ನಿಲ್ಲಿಸಬೇಕು. ನಿನ್ನೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಅವರನ್ನು ವಿಷದ ಹಾವು ಎಂದಿರುವುದು ಅವರಿಗೆ ಶೋಭೆ ತರುವುದಿಲ್ಲ. ಅವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದರು.

ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಎಲ್ಲಾ ಹುದ್ದೆಗಳನ್ನು ನೀಡಿತ್ತು. ಅದರೆ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಸೋಲಿಸುವುದೇ ಪಕ್ಷದ ಗುರಿಯಾಗಿದೆ. ಬಿಜೆಪಿಯನ್ನು ಟೀಕೆ ಮಾಡುವವರು ಉದ್ದಾರ ಆಗುವುದಿಲ್ಲ ಎಂದರು.

ಸರ್ಕಾರದಿಂದ ಲಾಭ ಪಡೆದವರು ಹಾಗೂ ಪಕ್ಷದ ವಿಚಾರಧಾರೆಗಳನ್ನು ಒಪ್ಪುವವರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವುದರ ಮೂಲಕ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...