ಬಾಲಿವುಡ್ ಸೆಲೆಬ್ರಿಟಿಗಳಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕೆಲವೊಮ್ಮೆ ಈ ಅಭಿಮಾನ ಅತಿರೇಕಕ್ಕೂ ಹೋಗಬಹುದು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಕುಟುಂಬವೊಂದು ನ್ಯೂಜೆರ್ಸಿಯ ಎಡಿಸನ್ ಸಿಟಿಯಲ್ಲಿರುವ ತಮ್ಮ ಮನೆಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರ ಪ್ರತಿಮೆಯನ್ನು ಸ್ಥಾಪಿಸಿದೆ.
ಸುಮಾರು 6 ಅಡಿ ಎತ್ತರದ ಈ ಪ್ರತಿಮೆಯನ್ನು ಔಪಚಾರಿಕವಾಗಿ ಪ್ರಸಿದ್ಧ ಸಮುದಾಯದ ನಾಯಕ ಆಲ್ಬರ್ಟ್ ಜಸಾನಿ ಅನಾವರಣಗೊಳಿಸಿದ್ದಾರೆ. ಬಿಗ್ ಬಿ ಪ್ರತಿಮೆಯನ್ನು ವೀಕ್ಷಿಸಲು 600ಕ್ಕೂ ಹೆಚ್ಚು ಕುಟುಂಬಗಳು ರಿಂಕು ಮತ್ತು ಗೋಪಿ ಸೇಠ್ ಅವರ ಮನೆಯ ಹೊರಗಡೆ ಜಮಾಯಿಸಿದ್ದರು. ದೊಡ್ಡ ಗಾಜಿನ ಪೆಟ್ಟಿಗೆಯೊಳಗೆ ಅಮಿತಾಭ್ ಪ್ರತಿಮೆಯನ್ನು ಇರಿಸಲಾಗಿದೆ.
ಅಮಿತಾಭ್ ಬಚ್ಚನ್ ಅಭಿಮಾನಿಗಳ ಸಂಘದ ವತಿಯಿಂದ ನೃತ್ಯ ಪ್ರದರ್ಶನವೂ ನಡೆಯಿತು. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಅಮಿತಾಭ್, ನಮ್ಮ ಕುಟುಂಬಕ್ಕೆ ದೇವರ ಸಮಾನ. ಅವರ ನಿಜಜೀವನ ಕೂಡ ನಮಗೆ ಸ್ಪೂರ್ತಿ ಅಂತಾ ಗೋಪಿ ಸೇಠ್ ಹೇಳಿದ್ದಾರೆ. ಇಂಟರ್ನೆಟ್ ಸೆಕ್ಯೂರಿಟಿ ಎಂಜಿನಿಯರ್ ಆಗಿ ಅವರು ಕೆಲಸ ಮಾಡ್ತಿದ್ದಾರೆ.
ಬಿಗ್ ಬಿ ತುಂಬಾ ಸರಳ ಜೀವಿ, ಇತರ ಸ್ಟಾರ್‌ಗಳಂತಲ್ಲ. ಹೀಗಾಗಿ ನನ್ನ ಮನೆಯಲ್ಲಿ ಅವರಿಗೂ ಸ್ಥಾನವಿರಬೇಕು ಅಂತಾ ತಮ್ಮ ಅಭಿಮಾನವನ್ನು ಗೋಪ ಸೇಠ್ ಹೊರಹಾಕಿದ್ದಾರೆ. ಆಗಸ್ಟ್ 27 ರಂದು ಅವರ ಹೊಸ ಮನೆಯ ಮುಂಭಾಗದಲ್ಲಿ ಅಮಿತಾಭ್ ಪ್ರತಿಮೆಯನ್ನು ಅವರು ಪ್ರತಿಷ್ಠಾಪಿಸಿದ್ದಾರೆ. 1990 ರಲ್ಲಿ ಗುಜರಾತ್‌ನಿಂದ ಅವರು ಅಮೆರಿಕಕ್ಕೆ ಬಂದು ನೆಲೆಸಿದ್ದರು.