
ಹೌದು, ಹಣೆಯ ಮೇಲೆ ಬಿಂದಿ ಇಲ್ಲದೆ ನಟಿ ಕರೀನಾ ಕಪೂರ್ ಖಾನ್ ಕಾಣಿಸಿಕೊಂಡಿರುವ ಜಾಹೀರಾತಿಗಾಗಿ ಆಭರಣ ಗುಂಪನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಜಾಹೀರಾತನ್ನು ಅಕ್ಷಯ ತೃತೀಯಕ್ಕಾಗಿ ಮಾಡಲಾಗಿದೆ. ಇದು ಹಿಂದೂಗಳಲ್ಲಿ ಚಿನ್ನದ ಖರೀದಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಜಾಹೀರಾತಿನಲ್ಲಿ, ಕರೀನಾ ಗುಲಾಬಿ ಬಣ್ಣದ ಲೆಹಂಗಾವನ್ನು ಧರಿಸಿ, ವಿಸ್ತಾರವಾದ ಡೈಮಂಡ್ ನೆಕ್‌ಪೀಸ್, ಕಿವಿಯೋಲೆಗಳು ಮತ್ತು ಮಾಂಗ್ ಟಿಕಾದೊಂದಿಗೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಆಕೆಯ ಹಣೆಯ ಮೇಲೆ ಬಿಂದಿ ಇಲ್ಲದಿರುವುದು ನೆಟ್ಟಿಗರನ್ನು ಕೆರಳಿಸಿದೆ.
ಬಹುಪಾಲು ಹಿಂದೂಗಳು ಈ ಜಾಹೀರಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಹಿಂದೂ ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಕಡೆಗಣಿಸುವ ಪ್ರಯತ್ನ ಎಂದು ಕರೆದಿದ್ದಾರೆ. ಹಣೆಯ ಮೇಲೆ ಬಿಂದಿಯನ್ನು ಧರಿಸುವುದು ಮಹಿಳೆಯರಿಗೆ, ವಿಶೇಷವಾಗಿ ವಿವಾಹಿತರಿಗೆ ಸಾಂಪ್ರದಾಯಿಕ ಭಾರತೀಯ ಉಡುಪಿನ ಪ್ರಮುಖ ಅಂಶವಾಗಿದೆ ಎಂದು ಹಲವರು ಪ್ರತಿಪಾದಿಸಿದ್ದಾರೆ.
ಕರೀನಾ ಕಪೂರ್ ಅವರ ಪತಿ ಮುಸ್ಲಿಂ ಆಗಿರುವುದರಿಂದ, ಈಕೆ ಹಿಂದೂಗಳ ಹಬ್ಬದ ಜಾಹೀರಾತಿನಲ್ಲಿ ಬಿಂದಿ ಇಲ್ಲದೆ ಕಾಣಿಸಿಕೊಂಡಿದ್ದಕ್ಕಾಗಿ ಬಳಕೆದಾರರು ಟ್ರೋಲ್ ಮಾಡಿದ್ದಾರೆ. ಅಲ್ಲದೆ ಮಲಬಾರ್ ಗೋಲ್ಡ್ ಅನ್ನು ಬಹಿಷ್ಕರಿಸಿ, ಬಿಂದಿ ಇಲ್ಲದಿದ್ರೆ ನಿಮಗೆ ವ್ಯಾಪಾರವೂ ಇಲ್ಲ ಮುಂತಾದ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟ್ಟರ್ ನಲ್ಲಿ ಬಹಿಷ್ಕಾರದ ಕರೆಗಳು ನೀಡಿದ್ದಾರೆ.