ಈ ಹಿಂದೆ ಬಾವಲಿಗಳ ರಕ್ಷಣೆಗೆ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದವು. ಈಗ ಈ ಬಾವಲಿಗಳ ಬೇಟೆ ಆಡುವುದಿರಲಿ, ಅದರ ಹತ್ತಿರ ಸುಳಿಯಲೂ ಜನ ಹೆದರುವಂತಹ ಪರಿಸ್ಥಿತಿ ಬಂದಿದೆ. ನಿಫಾ ವೈರಸ್, ಕೊರೊನಾ ವೈರಸ್ ಇದಕ್ಕೆ ಮೂಲ ಕಾರಣ.
ರಾತ್ರಿಯ ಕತ್ತಲಲ್ಲಿ ಸರಾಗವಾಗಿ ಸಂಚರಿಸಬಲ್ಲ ಪಕ್ಷಿ ಬಾವಲಿಗೆ ಅತ್ತಿ ಹಣ್ಣೆಂದರೆ ಪ್ರಾಣ. ಮಾಗಿದ ಅತ್ತಿ ಹಣ್ಣಿನ ಘಮಲಿನ ಹಾದಿಯ ಹಿಡಿದು ಹಾರಿ ಹೋಗುವ ಈ ಬಾವಲಿಗಳು ಹೊಟ್ಟೆ ತುಂಬಾ ಈ ಹಣ್ಣನ್ನು ತಿಂದು ತೃಪ್ತವಾಗುತ್ತವೆ.
ನಮ್ಮ ದೇಶದ ಅತ್ಯಂತ ಪ್ರಾಚೀನ ಹಾಗೂ ಪಾರಂಪರಿಕ ಹಣ್ಣುಗಳಲ್ಲಿ ಅತ್ತಿ ಹಣ್ಣು ಕೂಡ ಪ್ರಮುಖವಾದದ್ದು. ವಿಶೇಷವಾಗಿ ಈ ಹಣ್ಣು ಮರದ ಕಾಂಡಭಾಗದಲ್ಲಿ ಬೆಳೆಯುತ್ತದೆ. ಇದೆಷ್ಟೇ ಪಾರಂಪರಿಕ ಮತ್ತು ಪೌಷ್ಟಿಕ ಹಣ್ಣಾಗಿದ್ದರೂ ಇದಿನ್ನು ವಾಣಿಜ್ಯೀಕರಣವಾಗಿಲ್ಲದ ಕಾರಣ ಅಷ್ಟಾಗಿ ಜನರು ಇದರ ಬಗ್ಗೆ ತಿಳಿದುಕೊಂಡಿಲ್ಲ.
ಸಾಮಾನ್ಯವಾಗಿ ಎಲ್ಲ ಹಣ್ಣುಗಳು ಮೊದಲು ಹೂವಾಗಿ ನಂತರ ಪೀಚಾಗಿ, ಕಾಯಾಗಿ, ಹಣ್ಣಾಗುವುದನ್ನು ನೋಡಿದ್ದೀರಿ. ಈ ಅತ್ತಿ ಹಣ್ಣು ಹಾಗಲ್ಲ. ಮರದ ಕಾಂಡಭಾಗ ಅಥವಾ ಕೊಂಬೆಗಳ ಮೇಲೆ ನೇರವಾಗಿ ಕಾಯಾಗಿ ಬಿಟ್ಟು, ಹಣ್ಣಾಗುವುದು ಇದರ ವಿಶೇಷ. ವರ್ಷದಲ್ಲಿ ಕನಿಷ್ಠ ಎರಡು ಬಾರಿಯಾದರೂ ಅತ್ತಿ ಹಣ್ಣು ಬೆಳೆಯುತ್ತದೆ.
ಇನ್ನು ಈ ಅತ್ತಿ ಹಣ್ಣು ಸೇವನೆಯಿಂದ ಹೊಟ್ಟೆ, ಕರುಳು ಮತ್ತು ಮೂತ್ರನಾಳಗಳಲ್ಲಿ ಉತ್ಪತ್ತಿಯಾಗುವಂತಹ ಕಲ್ಲುಗಳನ್ನು ಕರಗಿಸಬಹುದು, ಕಣ್ಣಿನ ಬೇನೆಗೆ ಇದು ರಾಮಬಾಣ ಇದ್ದಂತೆ.
ಇಂದಿನ ತಲೆಮಾರಿನ ಪೀಳಿಗೆಗೆ ಅತ್ತಿ ಹಣ್ಣೆಂದರೆ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಮಾರುಕಟ್ಟೆಯಲ್ಲಿ ಅಂಜೂರ ಮತ್ತು ಅತ್ತಿ ಹಣ್ಣು ಎರಡು ಸಿಗುತ್ತವೆ. ಎರಡೂ ಕೂಡ ಒಂದೇ ಜಾತಿಗೆ ಸೇರಿದವಾದರೂ ಅಂಜೂರಕ್ಕೆ ಇರುವಷ್ಟು ಡಿಮ್ಯಾಂಡ್ ಈ ಅತ್ತಿ ಹಣ್ಣಿಗೆ ಇಲ್ಲದಿರುವುದು ವಿಪರ್ಯಾಸ. ಇದರ ಜೊತೆಗೆ ಅತ್ತಿ ಹಣ್ಣೆಂದರೆ ಬಾವಲಿಗೆ ಪಂಚಪ್ರಾಣ ಎಂಬ ವಿಷಯವೂ ಈಗ ಈ ಹಣ್ಣಿಗೆ ಕಂಟಕವಾಗುತ್ತದೆ.