ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರಲಿದೆ. ಗಣೇಶನಿಗೆ ಕಡುಬು ಎಂದರೆ ಪ್ರೀತಿ. ಹಬ್ಬಕ್ಕೆ ಏನಾದರೂ ಸಿಹಿ ಮಾಡಬೇಕು ಎಂದುಕೊಂಡಿದ್ದರೆ ಬಾಳೆಲೆ ಬಳಸಿ ಮಾಡುವ ಈ ಸಿಹಿ ಕಡುಬು ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
ಅಕ್ಕಿ ಹಿಟ್ಟು-1 ಕಪ್, ತೆಂಗಿನಕಾಯಿ ತುರಿ-1 ಕಪ್, ಬೆಲ್ಲದ ಪುಡಿ-1/2 ಕಪ್, ಏಲಕ್ಕಿ ಪುಡಿ-1/2 ಟೀ ಸ್ಪೂನ್, ತುಪ್ಪ-1 ಟೀ ಸ್ಪೂನ್, ಉಪ್ಪು-ಚಿಟಿಕೆ, ಬಾಳೆಲೆ.
ಮಾಡುವ ವಿಧಾನ:
ಅಕ್ಕಿಹಿಟ್ಟನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಇದನ್ನು ಒಂದು ಅಗಲವಾದ ಬೌಲ್ ಗೆ ಹಾಕಿ. ಅದಕ್ಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ನಾದಿಕೊಂಡು ಮೃದುವಾದ ಮುದ್ದೆ ರೀತಿ ಮಾಡಿಕೊಳ್ಳಿ.
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಬೆಲ್ಲ ಹಾಕಿ ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ರೀತಿ ಮಾಡಿಕೊಳ್ಳಿ. ತುಂಬಾ ಗಟ್ಟಿ ಪಾಕ ಬರುವ ಅಗತ್ಯವಿಲ್ಲ. ಅಂಟು ಅಂಟಾಗಿದ್ದರೆ ಸಾಕು. ಇದಕ್ಕೆ ತೆಂಗಿನಕಾಯಿ ತುರಿ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.
ಬಾಳೆಲೆಯನ್ನು ಚೆನ್ನಾಗಿ ತೊಳೆದು ಒರೆಸಿಕೊಳ್ಳಿ. ನಂತರ ಅಕ್ಕಿಹಿಟ್ಟಿನ ಮಿಶ್ರಣದಿಂದ ಹದ ಗಾತ್ರದ ಉಂಡೆ ಮಾಡಿಕೊಂಡು ಬಾಳೆಲೆಗೆ ತುಸು ನೀರು ಅಥವಾ ತುಪ್ಪ ಸವರಿಕೊಂಡು ಅಕ್ಕಿ ಹಿಟ್ಟಿನ ಉಂಡೆಯನ್ನು ಅದರ ಮಧ್ಯೆ ಇಟ್ಟು ಕೈಯಿಂದ ತಟ್ಟಿ ಪೂರಿ ರೀತಿ ಮಾಡಿಕೊಳ್ಳಿ.
ಅದರ ಮಧ್ಯೆ ಬೆಲ್ಲದ ಮಿಶ್ರಣವನ್ನು 1 ಟೇಬಲ್ ಸ್ಪೂನ್ ನಷ್ಟು ಹಾಕಿ ಬಾಳೆಲೆಯನ್ನು ಮಧ್ಯಕ್ಕೆ ಮಡಚಿಕೊಳ್ಳಿ. ಇದರ ಜತೆಗೆ ಬಾಳೆಲೆಗೆ ಅಂಟಿಕೊಂಡ ಪೂರಿ ಕೂಡ ಮಡಚುತ್ತದೆ.
ಉಳಿದ ಉಂಡೆಗಳಿಂದ ಹೀಗೆ ಮಾಡಿಕೊಂಡು ಇಡ್ಲಿ ಕುಕ್ಕರ್ ನಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಸರ್ವ್ ಮಾಡುವಾಗ ಬಾಳೆಲೆಯನ್ನು ತೆಗೆದು ಸರ್ವ್ ಮಾಡಿ.