ಬೆಂಗಳೂರು: ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಧಿವಶರಾಗಿದ್ದಾರೆ. ಇಡೀ ಕನ್ನಡ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ.
ಕೇವಲ 46ನೇ ವಯಸ್ಸಿನಲ್ಲಿ ಪುನೀತ್ ರಾಜ್ ಕುಮಾರ್, ತಮ್ಮ ಜೀವನದ ಪಯಣ ಮುಗಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ವಿಕ್ರಂ ಆಸ್ಪತ್ರೆಯತ್ತ ಇಡೀ ಚಿತ್ರರಂಗವೇ ಧಾವಿಸಿ ಬರುವಷ್ಟರಲ್ಲಿ ಪುನೀತ್ ಇನ್ನು ನೆನಪು ಮಾತ್ರ ಎಂಬ ಸುದ್ದಿ ಕೇಳಿ ಕನ್ನಡ ಚಿತ್ರರಂಗಕ್ಕೆ ಆಘಾತ ತಂದಿದೆ.
ವಿಕ್ರಂ ಆಸ್ಪತ್ರೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಟರಾದ ಗಣೇಶ್, ಧ್ರುವ ಸರ್ಜಾ, ರವಿಚಂದ್ರನ್, ನೀನಾಸಂ ಸತೀಶ್, ಯೋಗರಾಜ್ ಭಟ್, ನಟಿಯರಾದ ಸುಧಾರಾಣಿ, ಶೃತಿ, ಜಯಮಾಲಾ, ಅನುಪ್ರಭಾಕರ್ ಸೇರಿದಂತೆ ಹಲವು ನಟ-ನಟಿಯರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಸ್ಯಾಂಡಲ್ ವುಡ್ ʼಪವರ್ ಸ್ಟಾರ್ʼ ಕೊನೆಯುಸಿರೆಳೆದಿದ್ದು, ಇಡೀ ಕನ್ನಡ ಚಿತ್ರರಂಗ, ಕೋಟ್ಯಂತರ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ.