ಮುಂಗಾರು ಆರಂಭವಾಗಿ ವಾರಗಳೇ ಕಳೆದಿವೆ. ಆದರೆ ಮಳೆ ಮಾತ್ರ ಮಾಯವಾಗಿದೆ. ಮುಂಗಾರು ಪೂರ್ವ ಮಳೆ ದೊಡ್ಡ ಪ್ರಮಾಣದಲ್ಲಿ ಸುರಿದಿದ್ದರಿಂದ ಮುಂಗಾರು ಮಳೆಯೂ ಚೆನ್ನಾಗಿ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದು, ಆದರೆ ಮಳೆ ಮಾತ್ರ ಆಗುತ್ತಿಲ್ಲ.
ಕೆಲವು ದಿನಗಳಿಂದ ಕೆಲ ಪ್ರದೇಶಗಳಲ್ಲಿ ಮಾತ್ರ ಅಲ್ಪಸ್ವಲ್ಪ ಮಳೆ ಸುರಿಯುತ್ತಿದ್ದು, ವ್ಯಾಪಕ ಮಳೆ ಆಗುತ್ತಿಲ್ಲ. ಇನ್ನು ಮೂರ್ನಾಲ್ಕು ದಿನದೊಳಗೆ ಮುಂಗಾರು ಮಳೆ ವ್ಯಾಪಕ ಪ್ರಮಾಣದಲ್ಲಿ ಆಗಲಿದೆ ಎಂದು ಸಂಬಂಧಪಟ್ಟವರು ಹೇಳುತ್ತಿದ್ದು, ಅದರ ನಿರೀಕ್ಷೆಯಲ್ಲೇ ರೈತರಿದ್ದಾರೆ.
ಮುಂಗಾರು ಮಳೆಗೆ ಕೆರೆಕಟ್ಟೆಗಳು, ಜಲಾಶಯಗಳು ತುಂಬುವ ನಿರೀಕ್ಷೆ ಎಲ್ಲರಲ್ಲೂ ಇದ್ದು, ಇದಾದರೆ ಕೃಷಿ ಚಟುವಟಿಕೆ, ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಸೇರಿದಂತೆ ಎಲ್ಲದಕ್ಕೂ ಅನುಕೂಲವಾಗಲಿದೆ. ಹೀಗಾಗಿ ಮುಂಗಾರು ಮಳೆ ತಡವಾದರೂ ವ್ಯಾಪಕವಾಗಿ ಸುರಿಯಲಿ ಎಂಬ ಆಶಾಭಾವನೆ ಎಲ್ಲರಲ್ಲಿದೆ.