ಆಗಾಗ ಬಾಯಿಯಲ್ಲಿ ಗುಳ್ಳೆಗಳು ಏಳುವುದು ಸಾಮಾನ್ಯ. ಬೇಸಿಗೆಯಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿರುತ್ತದೆ. ನಾಲಿಗೆ, ತುಟಿಗಳ ಒಳಗೆ, ಕೆನ್ನೆಗಳ ಒಳಭಾಗದಲ್ಲಿ ಗುಳ್ಳೆಗಳಾಗುತ್ತವೆ. ಬಾಯಿ ಹುಣ್ಣು ದೊಡ್ಡ ಸಮಸ್ಯೆಯಲ್ಲ, ಹುಣ್ಣಾದಾಗ ಆಹಾರ ಸೇವಿಸುವುದೇ ಕಷ್ಟವಾಗಿಬಿಡುತ್ತದೆ. ಮಾತನಾಡಲು ಕೂಡ ಸಾಧ್ಯವಾಗುವುದಿಲ್ಲ.
ಸರಿಯಾದ ಸಮಯದಲ್ಲಿ ಬಾಯಿ ಹುಣ್ಣುಗಳಿಗೆ ಮದ್ದು ಮಾಡದೇ ಇದ್ದರೆ ಅದು ಕ್ಯಾನ್ಸರ್‌ಗೂ ಕಾರಣವಾಗುವ ಅಪಾಯವಿರುತ್ತದೆ. ಆದ್ದರಿಂದ ಬಹುಕಾಲದಿಂದ ಬಾಯಿಯಲ್ಲಿ ಗುಳ್ಳೆಗಳ ಸಮಸ್ಯೆ ಇದ್ದರೆ ತಕ್ಷಣ ಚಿಕಿತ್ಸೆ ಪಡೆಯಿರಿ. ಹುಣ್ಣುಗಳ ಸಮಸ್ಯೆಯನ್ನು ನಿವಾರಿಸಲು ನೀವು ಮನೆಮದ್ದುಗಳನ್ನು ಸಹ ಆಶ್ರಯಿಸಬಹುದು.
ನಿಂಬೆ ಮತ್ತು ಜೇನುತುಪ್ಪದ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಲೋಟ ನೀರನ್ನು ಬಿಸಿ ಮಾಡಿ. ಈಗ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ. ಇವೆರಡನ್ನೂ ಮಿಶ್ರಣ ಮಾಡಿಕೊಂಡು ಸ್ವಲ್ಪ ಸಮಯದವರೆಗೆ ಬಿಡಿ. ನೀರು ಉಗುರು ಬೆಚ್ಚಗಾದಾಗ ಅದರಲ್ಲಿ ಗಾರ್ಗಲ್ ಮಾಡಿ. ಈ ರೀತಿ ಮಾಡುವುದರಿಂದ ಅಲ್ಸರ್ ಸಮಸ್ಯೆಯನ್ನು ಹೋಗಲಾಡಿಸಬಹುದು.
ಗ್ಲಿಸರಿನ್ ಮತ್ತು ಅರಿಶಿನ ಪುಡಿ ಕೂಡ ಬಾಯಿ ಹುಣ್ಣಿಗೆ ಪರಿಣಾಮಕಾರಿ ಔಷಧ. ಇದು ಗುಳ್ಳೆಗಳಿಂದ ಸುಡುವ ಸಂವೇದನೆಯನ್ನು ಕಡಿಮೆ ಮಾಡುತ್ತದೆ. ನಾಲ್ಕಾರು ಹನಿಗಳಷ್ಟು ಗ್ಲಿಸರಿನ್ ತೆಗೆದುಕೊಳ್ಳಿ, ಅದಕ್ಕೆ ಚಿಟಿಕೆ ಅರಿಶಿನವನ್ನು ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಬಾಯಿ ಹುಣ್ಣುಗಳ ಮೇಲೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಬಾಯಿ ತೊಳೆಯಿರಿ. ಈ ರೀತಿ ಮಾಡುವುದರಿಂದ ಬಾಯಿ ಹುಣ್ಣುಗಳ ಸಮಸ್ಯೆ ದೂರವಾಗುತ್ತದೆ.