ಅನಿಮಿಯಾ ಸಮಸ್ಯೆಯಿಂದ ಹಿಡಿದು, ಕ್ಯಾನ್ಸರ್ ಕೋಶಗಳಿಂದ ರಕ್ಷಣೆ, ಕಣ್ಣಿನ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಹಾರ್ಮೋನ್ ಅಸಮತೋಲನ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಬ್ರೊಕೋಲಿ ಅತ್ಯುತ್ತಮ ಪರಿಹಾರವೆಂದು ಸಂಶೋಧನೆಗಳು ಹೇಳುತ್ತವೆ. ಈ ನಿಟ್ಟಿನಲ್ಲಿ ವಾರಕ್ಕೊಮ್ಮೆಯಾದರೂ ಬ್ರೊಕೋಲಿ ನಿಮ್ಮ ಮೆನುವಿನಲ್ಲಿರಲಿ. ನಾವಿಂದೂ ಆಲೂ ಬ್ರೊಕೋಲಿ ಡ್ರೈ ಫ್ರೈ ಮಾಡುವ ವಿಧಾನವನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ.
ಮೊದಲಿಗೆ ಸ್ಟೌ ಆನ್ ಮಾಡಿ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿಕೊಂಡು ಕಾಲು ಚಮಚ ಉಪ್ಪು ಹಾಕಿಕೊಳ್ಳಬೇಕು. ಬಳಿಕ ಮೀಡಿಯಂ ಸೈಜ್ಗೆ ಹೆಚ್ಚಿಕೊಂಡಿರುವ 2 ಆಲೂಗೆಡ್ಡೆಯನ್ನು ಬೇಯಿಸಿಕೊಳ್ಳಬೇಕು. ಈಗ ಒಂದು ಕುದಿ ಬಂದ ನಂತರ ಬಿಡಿಸಿಟ್ಟುಕೊಂಡಿರುವ 2 ಬ್ರೊಕೋಲಿಯನ್ನು ಆಲೂಗೆಡ್ಡೆಯೊಂದಿಗೆ 3 ನಿಮಿಷ ಬೇಯಿಸಿಕೊಳ್ಳಬೇಕು. ಈ ಎರಡು ತರಕಾರಿ ಬೆಂದ ನಂತರ ನೀರನ್ನು ಬಸಿದುಕೊಳ್ಳಬೇಕು.
ಈಗ ಬಾಣಲಿ ಇಟ್ಟು ಒಂದು ಟೇಬಲ್ ಸ್ಪೂನ್ ವೆಜಿಟೇಬಲ್ ಆಯಿಲ್ ಹಾಕಿ ಬಿಸಿ ಮಾಡಿಕೊಳ್ಳಬೇಕು. ಬಳಿಕ ಇದಕ್ಕೆ ಒಂದು ಚಮಚ ಜೀರಿಗೆ ಹಾಕಿ ಫ್ರೈ ಮಾಡಿಕೊಳ್ಳಬೇಕು. ಹೆಚ್ಚಿಟ್ಟುಕೊಂಡಿರುವ ಒಂದು ಈರುಳ್ಳಿ, ಒಂದು ಹಸಿಮೆಣಸನ್ನು ಸೇರಿಸಿ ಫ್ರೈ ಹುರಿದುಕೊಳ್ಳಬೇಕು.
ನಂತರ ಮೀಡಿಯಂ ಸೈಜ್ಗೆ ಹೆಚ್ಚಿಕೊಂಡ ಒಂದು ಟೊಮ್ಯಾಟೊ, ದಪ್ಪ ಮೆಣಸಿನಕಾಯಿಯನ್ನು ಹಾಕಿ ಮಿಕ್ಸ್ ಮಾಡಬೇಕು. ಬಳಿಕ ಬೇಯಿಸಿಕೊಂಡ ಬ್ರೊಕೋಲಿ ಮತ್ತು ಆಲೂಗೆಡ್ಡೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
ಈ ಮೊದಲೇ ಆಲೂಗಡ್ಡೆ ಬ್ರೊಕೋಲಿಗೆ ಉಪ್ಪು ಹಾಕಿರುವುದರಿಂದ ಈಗ ಅರ್ಧ ಚಮಚದಷ್ಟು ಮಾತ್ರ ಉಪ್ಪು ಹಾಕಿಕೊಳ್ಳಬೇಕು. ಅರ್ಧ ಚಮಚ ಅರಿಶಿನ ಪುಡಿ, ಅರ್ಧ ಚಮಚ ಕಾಶ್ಮೀರಿ ಅಚ್ಚಖಾರದ ಪುಡಿ, ಅರ್ಧ ಚಮಚ ಜೀರಿಗೆ ಪುಡಿ, ಅರ್ಧ ಚಮಚ ಮೆಣಸಿನ ಪುಡಿ, ಅರ್ಧ ಚಮಚ ದನಿಯಾ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ನಂತರ ಮೀಡಿಯಂ ಪ್ಲೇಂನಲ್ಲಿ 2 ನಿಮಿಷ ಬೇಯಿಸಿಕೊಳ್ಳಬೇಕು. ಈ ಮಿಶ್ರಣ ಬೆಂದಿದ್ದರೆ ಸ್ಟಾ ಆಫ್ ಮಾಡಿ, 2 ಸ್ಪೂನ್ನಷ್ಟು ಟೊಮ್ಯಾಟೋ ಕೆಚಪ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
ಬ್ರೊಕೋಲಿ ಆಲೂ ಡ್ರೈ ಫ್ರೈ ಚಪಾತಿ, ರೋಟಿ, ಪರೋಟ್, ಬ್ರೌನ್ ಬ್ರೆಡ್ ಟೋಸ್ಟ್ ಜೊತೆಗೆ ಹೊಂದುತ್ತದೆ. ಇಲ್ಲವೇ ಸಂಜೆ ಸ್ನ್ಯಾಕ್ಸ್ ರೀತಿಯೂ ಸೇವಿಸಬಹುದು.