ದೋಸೆ, ಇಡ್ಲಿ, ಚಪಾತಿ, ರೊಟ್ಟಿ ಜೊತೆಗೆ ದಿನಕ್ಕೊಂದು ರೀತಿಯ ಪಲ್ಯ ಇದ್ದರೆ ಚೆನ್ನ. ಒಮ್ಮೆ ಟೊಮೆಟೋ ಕುರ್ಮಾ ಟ್ರೈ ಮಾಡಿ. ಇದು ಒಳ್ಳೆ ಕಾಂಬಿನೇಷನ್. ಹುಳಿ, ಉಪ್ಪು, ಖಾರ ಸರಿಯಾಗಿ ಬಿದ್ರೆ ಎಂಥವರ ಬಾಯಲ್ಲೂ ನೀರೂರಿಸುತ್ತೆ.
ಬೇಕಾಗುವ ಸಾಮಗ್ರಿ : ಕಾಲು ಕಪ್ ತೆಂಗಿನ ತುರಿ, 1 ಚಮಚ ಪುಟಾಣಿ, 5 ಗೋಡಂಬಿ, ಅರ್ಧ ಚಮಚ ಸೋಂಪು, 1 ಚಮಚ ದನಿಯಾ, 2 ಹಸಿಮೆಣಸಿನ ಕಾಯಿ, ಅರ್ಧ ಕಪ್ ನೀರು.
2 ಚಮಚ ಎಣ್ಣೆ, 1 ಚಮಚ ಸಾಸಿವೆ, ಅರ್ಧ ಚಮಚ ಉದ್ದಿನ ಬೇಳೆ, ಅರ್ಧ ಇಂಚು ದಾಲ್ಚಿನಿ, ಹೆಚ್ಚಿದ ಒಂದು ಈರುಳ್ಳಿ, ಅರ್ಧ ಚಮಚ ಅರಿಶಿನ, ಅರ್ಧ ಚಮಚ ಅಚ್ಚಖಾರದ ಪುಡಿ, ಉಪ್ಪು, ಅರ್ಧ ಚಮಚ ಸಕ್ಕರೆ, ನೀರು, ಹೆಚ್ಚಿದ ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ : ಬಾಣಲೆಗೆ ಎಣ್ಣೆ ಹಾಕಿ, ಅದು ಬಿಸಿಯಾದ ನಂತರ ಸಾಸಿವೆ, ಉದ್ದಿನ ಬೇಳೆ, ದಾಲ್ಚಿನಿ, ಕರಿಬೇವಿನ ಎಸಳುಗಳನ್ನು ಹಾಕಿ ಫ್ರೈ ಮಾಡಿ. ಸಾಸಿವೆ ಚಟಪಟ ಎಂದ ಬಳಿಕ ಹೆಚ್ಚಿದ ಈರುಳ್ಳಿ ಹಾಕಿ. ಹೊಂಬಣ್ಣ ಬರುವವರೆಗೂ ಫ್ರೈ ಮಾಡಿ ನಂತರ ಹೆಚ್ಚಿದ ಟೊಮೆಟೋ ಬೆರೆಸಿ. ಟೊಮೆಟೋ ಪೂರ್ತಿ ಸಾಫ್ಟ್ ಆದ ಮೇಲೆ ಅರಿಶಿನ, ಅಚ್ಚಖಾರದ ಪುಡಿ, ಸಕ್ಕರೆ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಮಿಕ್ಸಿ ಜಾರಿನಲ್ಲಿ ಕಾಯಿತುರಿ, ಪುಟಾಣಿ, ಗೋಡಂಬಿ, ಹುರಿದ ಸೋಂಪು, ದನಿಯಾ, ಹಸಿಮೆಣಸಿನ ಕಾಯಿ ಮತ್ತು ನೀರು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಬಾಣಲೆಯಲ್ಲಿದ್ದ ಟೊಮೆಟೋ ಮಿಕ್ಸ್ ಗೆ ಸೇರಿಸಿ ಬೇಕಾದರೆ ಸ್ವಲ್ಪ ನೀರು ಹಾಕಿಕೊಳ್ಳಬಹುದು. ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಿಸಿ ಬಿಸಿ ಕುರ್ಮಾ ಸವಿಯಲು ಸಿದ್ಧ.