ಗರಿಗರಿಯಾದ ಬ್ರೆಡ್ ಕಟ್ಲೆಟ್ ಎಂಥವರ ಬಾಯಲ್ಲೂ ನೀರೂರಿಸುವಂತಹ ತಿನಿಸು. ಚಹಾ ಜೊತೆಗೆ ಇದನ್ನು ಸವಿಯಬಹುದು. ಇದನ್ನು ತಯಾರಿಸುವುದು ಕೂಡ ಅತ್ಯಂತ ಸುಲಭ. ನೀವು ಡೀಪ್ ಫ್ರೈ ಮಾಡಬಹುದು, ಬೇಡ ಎನಿಸಿದ್ರೆ ಬಾಣಲೆಯಲ್ಲಿ ಶಾಲೋ ಫ್ರೈ ಕೂಡ ಮಾಡಬಹುದು.
ಬೇಕಾಗುವ ಸಾಮಗ್ರಿ : 4 ಬ್ರೆಡ್ ಸ್ಲೈಸ್, ಬೇಯಿಸಿ ಸ್ಮ್ಯಾಶ್ ಮಾಡಿದ 2 ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, ಸಣ್ಣಗೆ ಹೆಚ್ಚಿದ ಅರ್ಧ ಕ್ಯಾಪ್ಸಿಕಂ, 2 ಚಮಚದಷ್ಟು ಬೇಯಿಸಿದ ಕಾರ್ನ್, ಸಣ್ಣಗೆ ಹೆಚ್ಚಿದ 1 ಹಸಿಮೆಣಸಿನಕಾಯಿ, 1 ಚಮಚ ಶುಂಠಿ ಪೇಸ್ಟ್, ಕಾಲು ಚಮಚ ಅರಿಶಿನ, ಅರ್ಧ ಚಮಚ ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಗರಂ ಮಸಾಲ, ಅರ್ಧ ಚಮಚ ಚಾಟ್ ಮಸಾಲ, 1 ಚಮಚ ಕಾರ್ನ್ ಫ್ಲೋರ್, ಚಿಟಿಕೆ ಕಾಳುಮೆಣಸಿನ ಪುಡಿ, 1 ಚಮಚ ನಿಂಬೆರಸ, 2 ಚಮಚದಷ್ಟು ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ : ಬ್ರೆಡ್ ನ ಅಂಚನ್ನು ಕತ್ತರಿಸಿ ಹಾಕಿ. ನಂತರ ಚಿಕ್ಕಚಿಕ್ಕ ಚೂರುಗಳನ್ನಾಗಿ ಮಾಡಿಕೊಳ್ಳಿ. ಆಲೂಗಡ್ಡೆ, ಈರುಳ್ಳಿ, ಕ್ಯಾಪ್ಸಿಕಂ, ಕಾರ್ನ್, ಹಸಿಮೆಣಸಿನಕಾಯಿ, ಶುಂಠಿ ಪೇಸ್ಟ್, ಅರಿಶಿನ, ಅಚ್ಚಖಾರದ ಪುಡಿ, ಉಪ್ಪು, ಗರಂ ಮಸಾಲ, ಚಾಟ್ ಮಸಾಲ, ಕಾರ್ನ್ ಫ್ಲೋರ್, ಕಾಳುಮೆಣಸಿನ ಪುಡಿ, ನಿಂಬೆರಸ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಕೈಗೆ ಅಂಟಿಕೊಂಡಂತೆ ಅನಿಸಿದರೆ ಇನ್ನೂ ಸ್ವಲ್ಪ ಬ್ರೆಡ್ ಕ್ರಂಬ್ಸ್ ಹಾಕಿ.
ಕಲಸಿದ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಕೈಗಳ ಮೇಲೆ ಕಟ್ಲೆಟ್ ಆಕಾರಕ್ಕೆ ತಟ್ಟಿ. ಅದನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಡಯಟ್ ಬಗ್ಗೆ ಹೆಚ್ಚು ಗಮನ ಕೊಡುವವರಾಗಿದ್ದಲ್ಲಿ ಬಾಣಲೆಯಲ್ಲಿ ಶಾಲೋ ಫ್ರೈ ಮಾಡಬಹುದು. ಟೊಮೆಟೋ ಸಾಸ್ ಹಾಗೂ ಈರುಳ್ಳಿ ಸ್ಲೈಸ್ ಜೊತೆಗೆ ಬ್ರೆಡ್ ಕಟ್ಲೆಟ್ ಸವಿಯಿರಿ.