
ಈ ಬಾರಿ ಚಂದ್ರ ಭೂಮಿಯ ಸುತ್ತ ತನ್ನ ಕಕ್ಷೆಯಲ್ಲಿ ಅತ್ಯಂತ ಸಮೀಪದಲ್ಲಿದ್ದ. ಹಾಗಾಗಿಯೇ ಹುಣ್ಣಿಮೆಯದಂದು ಸೂಪರ್ ಮೂನ್ ಗೋಚರವಾಗಿದೆ. ಮಂಗಳವಾರ ಚಂದ್ರ ಭೂಮಿಯಿದ ಸುಮಾರು 2,22,238 ಮೈಲು ಒಳಗೆ ಬಂದಿದ್ದಾನೆ. ಸತತ ನಾಲ್ಕು ಸೂಪರ್‌ಮೂನ್‌ಗಳಲ್ಲಿ ಇದು ಎರಡನೆಯದು ಅನ್ನೋದು ಮತ್ತೊಂದು ವಿಶೇಷ.
ಸ್ಟ್ರಾಬೆರಿ ಮೂನ್ ವೀಕ್ಷಣೆ ಮಾಡಿದವರೆಲ್ಲ ಅದನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ನಾಸಾದ ಪ್ರಕಾರ ಸೂಪರ್‌ಮೂನ್ ತನ್ನ ಕಕ್ಷೆಯಲ್ಲಿ ಭೂಮಿಯಿಂದ ದೂರದಲ್ಲಿರುವಾಗ ವರ್ಷದ ಮಂಕಾದ ಚಂದ್ರನಿಗಿಂತ ಶೇ.17 ದೊಡ್ಡದಾಗಿರುತ್ತದೆ ಮತ್ತು ಶೇ.30 ಅಧಿಕ ಪ್ರಕಾಶಮಾನವಾಗಿ ಕಾಣುತ್ತದೆ. ಸೂಪರ್‌ಮೂನ್‌ಗಳು ಅಪರೂಪ ಮತ್ತು ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಸಂಭವಿಸುತ್ತದೆ.
ಸ್ಟ್ರಾಬೆರಿ ಮೂನ್ ಎಂದಾಕ್ಷಣ ಅದೇನು ಸ್ಟ್ರಾಬೆರಿಯಂತೆ ಕೆಂಪಾಗಿ ಅಥವಾ ಗುಲಾಬಿ ಬಣ್ಣದಲ್ಲಿ ಗೋಚರಿಸುವುದಿಲ್ಲ. ಈಶಾನ್ಯ ಅಮೆರಿಕ ಮತ್ತು ಪೂರ್ವ ಕೆನಡಾದ ಅಲ್ಗೊನ್ಕಿನ್ ಸ್ಥಳೀಯ ಅಮೆರಿಕನ್ ಬುಡಕಟ್ಟು ಜನರು ಹುಣ್ಣಿಮೆಗೆ ಸ್ಟ್ರಾಬೆರಿ ಮೂನ್ ಎಂದು ಹೆಸರಿಟ್ಟಿದ್ದಾರೆ. ಸ್ಟ್ರಾಬೆರಿ ಕೊಯ್ಲಿನ ಕಾಲ ಇದು ಎಂಬುದರ ಸಂಕೇತ ಇದಾಗಿದೆ. ಓಜಿಬ್ವೆ, ಅಲ್ಗೊನ್‌ಕ್ವಿನ್, ಲಕೋಟಾ ಮತ್ತು ಡಕೋಟಾ ಜನರು ಜೂನ್ ತಿಂಗಳಿನಲ್ಲಿ ಸ್ಟ್ರಾಬೆರಿಗಳ ಪಕ್ವತೆಯನ್ನು ಗುರುತಿಸಲು ಸ್ಟ್ರಾಬೆರಿ ಮೂನ್ ಎಂಬ ಹೆಸರನ್ನು ಬಳಸಿದ್ದಾರೆಂದು ಓಲ್ಡ್ ಫಾರ್ಮರ್ಸ್ ಅಲ್ಮಾನಾಕ್ ಹೇಳುತ್ತದೆ.
ಈ ವರ್ಷ ಇನ್ನೂ 6 ಹುಣ್ಣಿಮೆಗಳು ಬಾಕಿ ಇವೆ. ಸ್ಟ್ರಾಬೆರಿ ಮೂನ್ ಕೂಡ ಹಿಂದೂ ಹಬ್ಬವಾದ ವಟ ಪೂರ್ಣಿಮೆಯೊಂದಿಗೆ ಹೊಂದಿಕೆಯಾಗುತ್ತದೆ. ಈ ದಿನದಂದು ವಿವಾಹಿತ ಮಹಿಳೆಯರು ಆಲದ ಮರದ ಸುತ್ತಲೂ ದಾರವನ್ನು ಕಟ್ಟುತ್ತಾರೆ ಮತ್ತು ತಮ್ಮ ಸಂಗಾತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ.