ಮಕ್ಕಳು ಮನೆಯಲ್ಲಿದ್ದರೆ ಏನಾದರೂ ಸಿಹಿ ತಿನಿಸಿಗೆ ಬೇಡಿಕೆ ಇಡುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದಂತ ಬಾದಾಮ್ ಪುರಿ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು: 1 ಕಪ್ ಮೈದಾ, 1/2 ಕಪ್ ಚಿರೋಟಿ ರವೆ, ಸ್ವಲ್ಪ ಸೋಡಾಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೇಸರಿ ಪುಡಿ, 2 ಚಮಚ ತುಪ್ಪ, 1 ಕಪ್ ಸಕ್ಕರೆ, 1/4 ಸ್ಪೂನ್ ಏಲಕ್ಕಿ ಪುಡಿ, 1/2 ಲೀಟರ್ ಎಣ್ಣೆ, ಸ್ವಲ್ಪ ಕೊಬ್ಬರಿ ತುರಿ.
ಮಾಡುವ ವಿಧಾನ : ಒಂದು ಅಗಲವಾದ ಪಾತ್ರೆಗೆ ಮೈದಾ, ಚಿರೋಟಿ ರವೆ, ಚಿಟಿಕೆ ಉಪ್ಪು, ಚಿಟಿಕೆ ಸೋಡಾ ಪುಡಿ, ಚಿಟಿಕೆ ಕೇಸರಿ ಬಣ್ಣ ಹಾಕಿ ಮಿಶ್ರಣ ಮಾಡಿ. ನಂತರ ಇದಕ್ಕೆ ತುಪ್ಪ ಹಾಕಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಹಿಟ್ಟು ಕಲಸಿ ಸ್ವಲ್ಪ ಹೊತ್ತು ಇಡಿ. ನಂತರ ಒಂದು ಕಪ್ ಸಕ್ಕರೆ ಅದಕ್ಕೆ ಸ್ವಲ್ಪ ನೀರು ಹಾಕಿ ಕುದಿಸಿ ಒಂದು ಎಳೆ ಪಾಕ ಮಾಡಿ.
ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಗ್ಯಾಸ್ ಆಫ್ ಮಾಡಿ. ನಂತರ ಹಿಟ್ಟಿನ ಮಿಶ್ರಣ ತೆಗೆದುಕೊಂಡು ಪೂರಿ ಆಕಾರದಲ್ಲಿ ಲಟ್ಟಿಸಿ ಮಧ್ಯ ಮಡಚಿ ಎಣ್ಣೆಗೆ ಹಾಕಿ ಗರಿ ಗರಿ ಆಗುವ ಹಾಗೆ ಕರಿದು ಸಕ್ಕರೆ ಪಾಕದಲ್ಲಿ ಹಾಕಿ ಎರಡು ಬದಿ ಹೊರಳಿಸಿ. ನಂತರ ಇದನ್ನು ಒಂದು ತಟ್ಟೆಗೆ ಹಾಕಿ ಸ್ವಲ್ಪ ಕೊಬ್ಬರಿ ತುರಿ ಉದುರಿಸಿದರೆ ಬಾದಾಮ್ ಪುರಿ ಸವಿಯಲು ಸಿದ್ದ.