
ಬ್ರಹ್ಮಚಾರಿಗಳು ಬಾಣಲೆಯಲ್ಲಿ ಊಟ ಮಾಡಿದರೆ ಅವರ ಮದುವೆಯಲ್ಲಿ ಮಳೆ ಬರುತ್ತದೆ ಅನ್ನೋ ಗಾದೆ ಮಾತನ್ನು ನೀವು ಕೇಳಿರಬಹುದು. ಆದ್ರೆ ವಿವಾಹಿತರು ಬಾಣಲೆಯಲ್ಲಿ ಊಟ ಮಾಡಿದ್ರೆ ತಮ್ಮ ಜೀವನದುದ್ದಕ್ಕೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ.
ಈ ಎರಡು ರೀತಿಯ ಭಯದಿಂದಾಗಿ ಜನರು ಬಾಣಲೆಯಲ್ಲಿ ಆಹಾರ ಸೇವನೆ ಮಾಡುವುದಿಲ್ಲ. ಆದರೆ ಇದು ಕೇವಲ ಪುರಾಣವಲ್ಲ, ಇದರ ಹಿಂದೆ ಬಲವಾದ ವೈಜ್ಞಾನಿಕ ಕಾರಣವೂ ಇದೆ.
ಹಿಂದಿನ ಕಾಲದಲ್ಲಿ ಸ್ಟೀಲ್ ಪಾತ್ರೆಗಳು ಇರಲಿಲ್ಲ. ಪಾತ್ರೆಗಳನ್ನು ತೊಳೆಯಲು ಸೋಪ್ ಮತ್ತು ಡಿಟರ್ಜೆಂಟ್ ಪೌಡರ್ ಇರಲಿಲ್ಲ. ಜನರು ಬೇಳೆ ಕಾಳು, ಅಕ್ಕಿ ಇನ್ನಿತರ ಪದಾರ್ಥಗಳನ್ನು ಕಬ್ಬಿಣದ ಬಾಣಲೆಯಲ್ಲಿ ಬೇಯಿಸುತ್ತಿದ್ದರು. ಜಿಡ್ಡು ಹೋಗಲಿ ಅನ್ನೋ ಕಾರಣಕ್ಕೆ ಅಡುಗೆ ಆದ ಕೂಡಲೇ ಬಾಣಲೆಗೆ ನೀರು ಸುರಿದು ಇಡುತ್ತಿದ್ದರು. ನಂತರ ಆ ಬಾಣಲೆಯನ್ನು ಬೂದಿ ಅಥವಾ ಮಣ್ಣಿನಿಂದ ಸ್ವಚ್ಛಗೊಳಿಸುತ್ತಿದ್ದರು.
ಅನೇಕ ಮನೆಗಳಲ್ಲಿ ಇರುವುದು ಒಂದೇ ಒಂದು ಬಾಣಲೆ. ಅದರಲ್ಲೇ ಎಲ್ಲಾ ತಿನಿಸುಗಳನ್ನು ತಯಾರಿಸ್ತಾ ಇದ್ದಿದ್ರಿಂದ ಜಿಡ್ಡು ಕೂತು ಅದನ್ನು ಮಣ್ಣು, ಬೂದಿಯಿಂದ ಕ್ಲೀನ್ ಮಾಡುವುದು ಕಷ್ಟವಾಯ್ತು. ಇದರಿಂದಾಗಿ ಬಾಣಲೆಯಲ್ಲಿ ಕೊಳೆ ಸಂಗ್ರಹವಾಗುವ ಅಪಾಯವಿತ್ತು. ಹಾಗಾಗಿ ಅಡುಗೆ ಮಾಡುವ ಬಾಣಲೆಯಲ್ಲಿ ಊಟ ಮಾಡುವುದು ಅಸಭ್ಯತೆ ಎಂದು ಪರಿಗಣಿಸಲ್ಪಟ್ಟಿತ್ತು. ಅಷ್ಟೇ ಅಲ್ಲ ಎಂಜಲು ಮಾಡಿದ ಆಹಾರ ಸೇವನೆಯೂ ನಿಷಿದ್ಧವಾಗಿತ್ತು.
ಹಾಗಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಬಾಣಲೆಯಲ್ಲಿ ಬ್ರಹ್ಮಚಾರಿ ಊಟ ಮಾಡಿದ್ರೆ ಮದುವೆಯಲ್ಲಿ ಮಳೆಯಾಗುತ್ತದೆ ಎಂದು ಪ್ರಚಾರ ಮಾಡಲಾಯಿತು. ವಿವಾಹಿತರು ಈ ರೀತಿ ಮಾಡಿದರೆ ಬಡತನವನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಬೆಳೆಯಿತು. ಜನರು ಈ ನಂಬಿಕೆಯನ್ನು ಇಂದಿಗೂ ಅನುಸರಿಸುತ್ತಾರೆ, ಬಾಣಲೆಯಲ್ಲಿ ಊಟ ಮಾಡುವುದಿಲ್ಲ.
ಇನ್ನೂ ಒಂದು ಕಾರಣವೆಂದರೆ ಬಾಣಲೆಯನ್ನು ಶುಚಿಯಾಗಿ ತೊಳೆಯದೇ ಇದ್ದರೆ ಹಿಂದಿನ ದಿನ ಮಾಡಿದ ತಿನಿಸು ಅದಕ್ಕೆ ಅಂಟಿಕೊಂಡಿರುತ್ತದೆ. ಅದೇ ಬಾಣಲೆಯಲ್ಲಿ ಊಟ ಮಾಡಿದ್ರೆ ಹಳಸಿದ ಪದಾರ್ಥ ಹೊಟ್ಟೆ ಸೇರಬಹುದು. ಹಾಗಾಗಿ ಬಾಣಲೆಯಲ್ಲಿ ಊಟ ಮಾಡಬಾರದು ಎಂಬ ನಿಯಮವಿದೆ.