
ಹಾಲುಣಿಸುವ ತಾಯಂದಿರು ಮೆಂತೆ ಕಾಳನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತ್ಯೆ ಕಾಳು, ಮೆಂತ್ಯೆ ಸೊಪ್ಪು ಬಳಸುವುದರಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಸಾಕಷ್ಟು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.
ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಬಿ6, ಕ್ಯಾಲ್ಸಿಯಂ, ಪೊಟ್ಯಾಷಿಯಂ ಹೆಚ್ಚಾಗಿ ಇರುವುದರಿಂದ ಈ ಕಾಳು ಆರೋಗ್ಯಕರ ಲಾಭಗಳನ್ನು ಕೊಡುತ್ತದೆ.
ಹಾಲುಣಿಸುವ ತಾಯಂದಿರಲ್ಲಿ ಎದೆ ಹಾಲು ಹೆಚ್ಚಿಸುವ ಗುಣ ಈ ಮೆಂತ್ಯೆ ಕಾಳುಗಳಲ್ಲಿ ಅಡಗಿದೆ. ಅದರೊಂದಿಗೆ ದೇಹದ ಕೊಬ್ಬನ್ನು ಕರಗಿಸುತ್ತದೆ. ಇದನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ಆ ನೀರಿನ ಜೊತೆ ಸೇವಿಸಬೇಕು. ಮೆಂತ್ಯೆ ಪುಡಿ ಮಾಡಿಕೊಂಡು ಹಾಲಿನ ಜೊತೆ ಸೇವಿಸಬಹುದು. ಅಥವಾ ಮೆಂತ್ಯೆಯನ್ನು ಮೊಳಕೆ ಬರಿಸಿಯೂ ಸೇವಿಸಬಹುದು. ಆದರೆ ಇದನ್ನು ಹೆಚ್ಚಾಗಿ ತಿನ್ನಬಾರದು. ಹಿತಮಿತವಾಗಿ ಸೇವಿಸಬೇಕು.
ಹೆರಿಗೆ ಆದ ನಂತರ ಬಾಣಂತಿಯರಿಗೆ ಮೆಂತ್ಯೆ ಲಾಡುಗಳನ್ನೂ ತಿನ್ನಲು ಕೊಡುತ್ತಾರೆ. ಇದು ದೇಹದ ಶಕ್ತಿಯನ್ನು ಮರಳಿಸುತ್ತದೆ ಎಂದೂ ಹೇಳಲಾಗುತ್ತದೆ. ತಾಯಂದಿರಿಗೆ ಶಕ್ತಿ ಹೆಚ್ಚಾದಷ್ಟೂ ಎದೆ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಇದರ ಜೊತೆಗೆ ಅತಿಯಾದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.