ಮೀರತ್: ಸಾಲ ಮರುಪಾವತಿ ಮಾಡದಿದ್ದರೆ ಬ್ಯಾಂಕ್ ಸಿಬ್ಬಂದಿ ಅಂಥವರ ಮನೆಗೆ ಬೀಗ ಜಡಿಯುವುದು, ವಾಹನ ಜಪ್ತಿ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ಬಾಡಿಗೆ ಪಾವತಿಸದ ಕಾರಣಕ್ಕೆ ಕಟ್ಟಡ ಮಾಲೀಕರು ಬ್ಯಾಂಕ್‌ಗೆ ಬೀಗ ಹಾಕಿರುವ ಘಟನೆ ನಡೆದಿದೆ.
ಬಾಡಿಗೆ ಪಾವತಿಸದ ಕಾರಣ ಮೀರತ್‌ನ ದೌರಾಲಾ ಪ್ರದೇಶದ ಕಟ್ಟಡ ಮಾಲೀಕರು ಜಿಲ್ಲಾ ಸಹಕಾರಿ ಬ್ಯಾಂಕ್‌ನ ಸಕೋಟಿ ಶಾಖೆಗೆ ಬುಧವಾರ ಬೀಗ ಜಡಿದಿದ್ದಾರೆ. ಕಟ್ಟಡದ ಮಾಲೀಕ ಕಿರಣ್‌ಪಾಲ್ ಸಿಂಗ್ ಎಂಬಾತ ತನ್ನ ಕಟ್ಟಡವನ್ನು ಸಹಕಾರಿ ಬ್ಯಾಂಕ್‌ಗೆ ಬಾಡಿಗೆಗೆ ನೀಡಿದ್ದ. ಆದರೆ, ಕಳೆದ 8 ವರ್ಷಗಳಿಂದ ಬ್ಯಾಂಕ್ ಹಾಗೂ ಕಟ್ಟಡ ಮಾಲೀಕರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಬುಧವಾರ ಬ್ಯಾಂಕ್‌ಗೆ ಬೀಗ ಜಡಿದು ಸಂಪೂರ್ಣ ಬಾಡಿಗೆ ಹಣ ಕೊಡುವವರೆಗೂ ತೆರೆಯಲು ನಿರಾಕರಿಸಿದ್ದರು. ಆದರೆ, ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರ ಮನವೊಲಿಕೆ ಬಳಿಕ ಬ್ಯಾಂಕ್‌ನ ಬೀಗ ತೆರೆಯಲಾಯಿತು.
2007ರಲ್ಲಿ ಬಾಡಿಗೆಗೆ ಕಟ್ಟಡ ನೀಡಲಾಗಿದ್ದು, ಒಪ್ಪಂದವೂ ಮುಗಿದಿದೆ ಎಂದು ಕಿರಣ್‌ಪಾಲ್ ಸಿಂಗ್ ಬಹಿರಂಗಪಡಿಸಿದ್ದಾರೆ. ಹಲವು ಬಾರಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದರೂ ಯಾರೂ ಗಮನ ಹರಿಸಿಲ್ಲ. ಇಷ್ಟು ವರ್ಷಗಳಾಗಿದ್ದರಿಂದ ಬಾಡಿಗೆಯನ್ನು ಹೆಚ್ಚಿಸಬೇಕಿತ್ತು. ಆದರೆ, ಇದಕ್ಕೆ ವಿರುದ್ಧವಾಗಿ, ಬ್ಯಾಂಕ್ ಬಾಡಿಗೆಯನ್ನು ಕಡಿಮೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.