ವ್ಯಕ್ತಿಯೊಬ್ಬ ಆತನ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಮಹಿಳೆಗೆ ಒಳ ಉಡುಪುಗಳನ್ನು ಉಡುಗೊರೆಯಾಗಿ ನೀಡಿ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸಿದ್ದಾನೆ. ಈ ಘಟನೆ ಬೆಂಗಳೂರು ದಕ್ಷಿಣದಲ್ಲಿರುವ ಶ್ರೀನಗರದಲ್ಲಿ ನಡೆದಿದೆ. ಮಹಿಳೆ, 42 ವರ್ಷದ ಶಾಲಾ ಶಿಕ್ಷಕಿಯಾಗಿದ್ದು, ಕಳೆದ 12 ವರ್ಷಗಳಿಂದ ಪದ್ಮನಾಭ ಎಂಬುವವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಘಟನೆ ಬಳಿಕ ಮಹಿಳೆ ಮನೆ ಮಾಲೀಕ ಪದ್ಮನಾಭನ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೆ ಮಾಲೀಕ ಪದ್ಮನಾಭ ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದರು. ಸಾಮಾನ್ಯ ಉಡುಗೊರೆ ಎಂದು ನಾನು ತೆಗೆದುಕೊಂಡೆ, ಆದರೆ ಅದನ್ನು ಬಿಚ್ಚಿ ನೋಡಿದಾಗ ನನಗೆ ಆಶ್ಚರ್ಯವಾಯಿತು. ಗಿಫ್ಟ್ ನಲ್ಲಿ ಒಳ ಉಡುಪುಗಳನ್ನ ನೀಡಿದ್ದರು. ಅಲ್ಲದೇ ನಿರಂತರವಾಗಿ ಕರೆ ಮಾಡಿ, ನಿನ್ನ ಹುಟ್ಟುಹಬ್ಬದಂದು ನಾನು ನೀಡಿರುವ ಉಡುಗೊರೆಯನ್ನ ಧರಿಸಿ, ನನ್ನೊಂದಿಗೆ ಸುತ್ತಾಡಲು ಬಾ ಎಂದು ಪೀಡಿಸುತ್ತಿದ್ದರು. ನಾನು ಇದಕ್ಕೆ ವಿರೋಧಿಸಿದಾಗ, ಮನೆ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಅಲ್ಲದೇ ಜನವರಿ 11 ರ ರಾತ್ರಿ ಗೇಟ್ ಹಾರಿ ನನ್ನ ಮನೆಗೆ ಹೊರಗಿನಿಂದ ಬೀಗ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಜನವರಿ 12 ರಂದು ಈ ವಿಚಾರವಾಗಿ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 441(ಅತಿಕ್ರಮಣ), 504 (ಶಾಂತಿ ಭಂಗ, ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 354A (1) (ii) (ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಅಥವಾ ವಿನಂತಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪದ್ಮನಾಭ ಅವರು ತಾನು ನಿರಪರಾಧಿ ಎಂದು ಹೇಳಿದ್ದು, ಮನೆ ಖಾಲಿ ಮಾಡಲು ಕೇಳಿರುವುದಕ್ಕೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 11 ರಂದು ಮಹಿಳೆ ಮನೆಯೊಳಗೆ ಮಲಗಿರುವಾಗ ಮಾಲೀಕ ಪದ್ಮನಾಭ ಹೊರಗಿನಿಂದ ಬೀಗ ಹಾಕಿದ್ದ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪ ಸಾಬೀತಾದರೆ, ಮನೆ ಮಾಲೀಕನ ವಿರುದ್ಧ ತಕ್ಕ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.