ಶಾಲಾ ಶಿಕ್ಷಕರೊಬ್ಬರ ಜವಾಬ್ದಾರಿಯುತ ನಡೆಯಿಂದಾಗಿ ಒಂಭತ್ತು ವರ್ಷದ ಬಾಲಕ ಪ್ರಾಣಾಪಾಯದಿಂದ ಪಾರಾಗಿರೋ ಘಟನೆ ನಡೆದಿದೆ.
ಆಕಸ್ಮಿಕವಾಗಿ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳವನ್ನು ಬಾಲಕ ನುಂಗಿದ್ದಾನೆ. ತಮ್ಮ ಚಾಕಚಕ್ಯತೆಯಿಂದ ಕೂಡಲೇ ಶಿಕ್ಷಕರು ವಿದ್ಯಾರ್ಥಿಯ ಜೀವ ಕಾಪಾಡಿದ್ದಾರೆ. ಈ ದೃಶ್ಯ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಇದೀಗ ವೈರಲ್ ಆಗುತ್ತಿದೆ.
ರಾಬರ್ಟ್ ಎಂಬ ವಿದ್ಯಾರ್ಥಿ, ನ್ಯೂಜೆರ್ಸಿಯ ಈಸ್ಟ್ ಆರೆಂಜ್ ಕಮ್ಯುನಿಟಿ ಚಾರ್ಟರ್ ಸ್ಕೂಲ್‌ನಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ. ತರಗತಿಯಲ್ಲಿ ಆತ ನೀರು ಕುಡಿಯಲು ಮುಂದಾಗಿದ್ದು, ಬಾಟಲಿಯಿಂದ ಮುಚ್ಚಳವನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ, ಕೈಯಲ್ಲಿ ಮುಚ್ಚಳವನ್ನು ತೆಗೆಯಲು ಸಾಧ್ಯವಾಗದಾಗ ಆತ ತನ್ನ ಬಾಯಿಯ ಮುಖಾಂತರ ಮುಚ್ಚಳವನ್ನು ತೆಗೆದಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಕ್ಯಾಪ್ ಗಂಟಲಿನಲ್ಲಿ ಸಿಲುಕಿಕೊಂಡಿದೆ. ರಾಬರ್ಟ್ ತಕ್ಷಣವೇ ಕ್ಯಾಪ್ ಅನ್ನು ತನ್ನ ಗಂಟಲಿನಿಂದ ಹೊರಹಾಕಲು ಸಾಧ್ಯವಾಗದ ಕಾರಣ ಉಸಿರುಗಟ್ಟಲಾರಂಭಿಸಿದೆ.
ಕೂಡಲೇ ಬಾಲಕ ಸಹಾಯಕ್ಕಾಗಿ ಶಿಕ್ಷಕಿ ಬಳಿ ಓಡಿದ್ದಾನೆ. ಕೂಡಲೇ ಶಿಕ್ಷಕಿ ಜಾನೀಸ್ ಜೆಂಕಿನ್ಸ್ ಮುಚ್ಚಳವನ್ನು ಹೊರಹಾಕಲು ಹೈಮ್ಲಿಚ್ ತಂತ್ರವನ್ನು ಪ್ರದರ್ಶಿಸಿದ್ದಾರೆ. ಅದೃಷ್ಟವಶಾತ್ ಮುಚ್ಚಳವು ಗಂಟಲಿನಿಂದ ಹೊರಬಂದಿದೆ. ಈ ಮೂಲಕ ಬಾಲಕನ ಜೀವವನ್ನು ಕಾಪಾಡಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೈಮ್ಲಿಚ್ ಕುಶಲ ವಿಧಾನ ಎಂದರೇನು.. ?
ಹೈಮ್ಲಿಚ್ ಕುಶಲ ಅಂದ್ರೆ ಕಿಬ್ಬೊಟ್ಟೆಯ ಒತ್ತಡ ಎಂದೂ ಕರೆಯುತ್ತಾರೆ. ಇದು ಗಂಟಲಿನಲ್ಲಿ ಸಿಲುಕಿರುವ ವಸ್ತುವನ್ನು ತೆಗೆದುಹಾಕಲು ಸರಳವಾದ ಪ್ರಥಮ ಚಿಕಿತ್ಸಾ ವಿಧಾನವಾಗಿದೆ. ಎರಡೂ ಕೈಗಳಿಂದ ಅವರನ್ನು ಹಿಡಿದು ಪದೇಪದೇ ಮೇಲಕ್ಕೆತ್ತುತ್ತಾ ಮಾಡುವ ವಿಧಾನ ಇದಾಗಿದೆ. ಇದು ಶ್ವಾಸಕೋಶವನ್ನು ಸಂಕುಚಿತಗೊಳಿಸುತ್ತದೆ. ಶ್ವಾಸನಾಳದಲ್ಲಿ ಇರುವ ಯಾವುದೇ ವಸ್ತುವಿನ ಮೇಲೆ ಒತ್ತಡವನ್ನು ಬೀರಿ, ಅದನ್ನು ಹೊರಹಾಕುತ್ತದೆ.
VIDEO